ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಎ.ಮಂಜುನಾಥ್ ಅವರು ಇ-ಚಲನ್ ದಂಡ ಪಾವತಿ ಕುರಿತಾದ ಡಿಜಿಟಲ್ ಬ್ಯಾನರ್ ಬಿಡುಗಡೆಗೊಳಿಸಿದರು. ಎಂ.ಎಸ್.ಸಂತೋಷ್, ದೇವರಾಜ್ ಇದ್ದರು. 
ಶಿವಮೊಗ್ಗ

ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಗೆ ಶೇ.50 ರಿಯಾಯಿತಿ | Traffic rules Violation

ಪ್ರಮುಖ ಮುಖ್ಯಾಂಶಗಳು

  • ಜೂ.21ರಿಂದ ಜು.11ರವರೆಗೂ ಅವಕಾಶ
  • ಬಾಕಿ ಇರುವ ಪ್ರಕರಣಗಳ ಸಂಖ್ಯೆ 2,99,037
  • ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಎ.ಮಂಜುನಾಥ್ ಮಾಹಿತಿ
ಶಿವಮೊಗ್ಗ: ಸಂಚಾರ ನಿಯಮ ಉಲ್ಲಂಘನೆ(Traffic rules Violation)ಯ ದಂಡ ಪಾವತಿಗೆ ಶೇ. 50ರಷ್ಟು ರಿಯಾಯಿತಿ ಘೋಷಿಸಿದ್ದು, 2026ರ ಏಪ್ರಿಲ್‌ವರೆಗೂ ದಾಖಲಾಗಿರುವ ಇ-ಚಲನ್ ಪ್ರಕರಣಗಳ ದಂಡದ ಮೊತ್ತದಲ್ಲಿ ರಿಯಾಯಿತಿ ನೀಡಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಎ.ಮಂಜುನಾಥ್ ಹೇಳಿದರು.
ಜೂ.21ರಿಂದ ಜುಲೈ 10ರವರೆಗೆ ಶೇ. 50ರಷ್ಟು ದಂಡ ಪಾವತಿ(Payment of penalty)ಸಿ ತಮ್ಮ ಮೇಲಿರುವ ಬಾಕಿ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಬಹುದು. 2023ರ ಆ.28ರಿಂದ 2026ರ ಏ.30ರವರೆಗೆ ಸ್ಮಾರ್ಟ್‌ಸಿಟಿ ಪೊಲೀಸ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್‌(Smart City Police Command and Control Center)ನ ಐಟಿಎಂಎಸ್ ಮೂಲಕ 4,38,023 ಇ-ಚಲನ್ ಪ್ರಕರಣ ದಾಖಲಾಗಿದ್ದು, 31,80,66,250 ರೂ. ದಂಡದ ಮೊತ್ತವಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
1,38,986 ಇ-ಚಲನ್‌ಗಳು ಇತ್ಯರ್ಥಗೊಂಡು 6,09,47,900 ರೂ. ವಸೂಲಾಗಿದೆ. 2,99,037 ಪ್ರಕರಣಗಳು ಬಾಕಿ ಇದ್ದು, 23,71,18,350 ರೂ. ದಂಡ ವಸೂಲಾತಿಗೆ ಬಾಕಿ ಇದೆ. ಶಿವಮೊಗ್ಗ, ಭದ್ರಾವತಿ ಸಂಚಾರ ಪೊಲೀಸ್ ಠಾಣೆ, ಇ-ಚಲನ್ ಪಿಡಿಎ ಮಷಿನ್(E-Challan PDA Machine) ಹೊಂದಿರುವ ಎಎಸ್‌ಐ ಹಾಗೂ ಮೇಲ್ಪಟ್ಟ ಪೊಲೀಸ್ ಅಧಿಕಾರಿಗಳ ಬಳಿ ದಂಡ ಪಾವತಿಸಬಹುದು ಎಂದರು.
ಶಿವಮೊಗ್ಗದ ಅಶೋಕ ವೃತ್ತ, ಶಿವಪ್ಪ ನಾಯಕ ವೃತ್ತ, ಗೋಪಿ ವೃತ್ತ ಹಾಗೂ ಪೊಲೀಸ್ ಚೌಕಿ ವೃತ್ತದಲ್ಲಿರುವ ಪೊಲೀಸ್ ಕಿಯೋಸ್ಕ್‌ಗಳಲ್ಲಿ ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ವಿಶೇಷ ಕೌಂಟರ್ ಲಭ್ಯವಿದೆ ಎಂದು ತಿಳಿಸಿದರು. ಇ-ಚಲನ್ ದಂಡ ಪಾವತಿ ಕುರಿತು ಡಿಜಿಟಲ್ ಬ್ಯಾನರ್ ಬಿಡುಗಡೆ(Digital banner launch)ಗೊಳಿಸಲಾಯಿತು.
ಜು.11ರಂದು ರಾಷ್ಟ್ರೀಯ ಲೋಕ್ ಅದಾಲತ್: ಬಾಕಿ ಇರುವ ಪ್ರಕರಣಗಳ ತ್ವರಿತ ವಿಲೇವಾರಿಗೆ ಜು.11ರಂದು ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ವರ್ಷದ 2ನೇ ರಾಷ್ಟ್ರೀಯ ಲೋಕ್ ಅದಾಲತ್(National Lok Adalat) ಹಮ್ಮಿಕೊಳ್ಳಲಾಗಿದೆ. ಮಾ.14ರಂದು ಆಯೋಜಿಸಿದ್ದ ಮೊದಲ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ನ್ಯಾಯಾಲಯದಲ್ಲಿದ್ದ 14,501 ಪ್ರಕರಣಗಳನ್ನು ಇತ್ಯರ್ಥಪಡಿಸಿ 28.48 ಕೋಟಿ ರೂ.ಗೂ ಅಧಿಕ ಪರಿಹಾರ ವಿತರಿಸಲಾಗಿತ್ತು. 1,40,015 ವ್ಯಾಜ್ಯಪೂರ್ವ ಪ್ರಕರಣಗಳನ್ನು ಬಗೆಹರಿಸಿ 17.26 ಕೋಟಿ ರೂ.ಗೂ ಅಧಿಕ ಮೊತ್ತದ ವಿವಾದಗಳನ್ನು ಬಗೆಹರಿಸಲಾಗಿತ್ತು ಎಂದು ನ್ಯಾಯಾಧೀಶ ಜಿ.ಎ.ಮಂಜುನಾಥ್(Judge G.A.Manjunath) ಹೇಳಿದರು. 
ಭೂ, ಜಲ, ವಾಯು ಸಾರಿಗೆ, ಅಂಚೆ, ದೂರವಾಣಿ, ವಿದ್ಯುತ್, ನೀರು ಸರಬರಾಜು, ಸಾರ್ವಜನಿಕ ನೈರ್ಮಲ್ಯ, ವಿಮೆ, ಆಸ್ಪತ್ರೆ, ಔಷಧಾಲಯ, ಬ್ಯಾಂಕಿಂಗ್ ಹಾಗೂ ರಿಯಲ್ ಎಸ್ಟೇಟ್ ಸೇವೆ(Real estate service)ಗಳಿಗೆ ಸಂಬಂಧಿಸಿದ ವಿವಾದಗಳನ್ನು ಬಗೆಹರಿಸಲು ‘ಕಾಯಂ ಲೋಕ್ ಅದಾಲತ್’ ಅತ್ಯುತ್ತಮ ವೇದಿಕೆ. ಕೋರ್ಟ್ ಶುಲ್ಕ ಹಾಗೂ ಆದಾಯದ ಮಿತಿ ಇಲ್ಲ ಎಂದರು. ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಎಸ್.ಸಂತೋಷ್, ಸಂಚಾರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ದೇವರಾಜ್ ಸುದ್ದಿಗೊಷ್ಠಿಯಲ್ಲಿದ್ದರು.

ಸಮಾಧಾನ್ ಸಮಾರೋಹ್‌ಗೆ 23 ಪ್ರಕರಣ

ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಪ್ರಕರಣಗಳಿಗೆ ಆ.21, 22 ಮತ್ತು 23ರಂದು ಸಮಾಧಾನ್ ಸಮಾರೋಹ್(Samadhan Samaroh) ವಿಶೇಷ ಲೋಕ್ ಅದಾಲತ್ ನಡೆಯಲಿದೆ. ಜಿಲ್ಲೆಗೆ ಸಂಬಂಧಿಸಿ 23 ಪ್ರಕರಣ ಗುರುತಿಸಿ ವಿವರ ಕಳುಹಿಸಿಕೊಡಲಾಗಿದೆ. ಮಧ್ಯಸ್ಥಗಾರರ ಮೂಲಕ ರಾಜಿ ಸಂಧಾನ ಪ್ರಕ್ರಿಯೆ ನಡೆಯಲಿದೆ ಎಂದು ಜಿ.ಎ.ಮಂಜುನಾಥ್ ಎಂದರು. ಚೆಕ್ ಅಮಾನ್ಯ ಕಾಯ್ದೆ(Invalid Check Act) ಅಡಿಯಲ್ಲಿ ಬಾಕಿ ಇರುವ ಪ್ರಕರಣಗಳ ಇತ್ಯರ್ಥಕ್ಕಾಗಿ ಜು.18 ಮತ್ತು ನ.21ರಂದು ವಿಶೇಷ ಲೋಕ್ ಅದಾಲತ್ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಮೇ 31ರವರೆಗೆ ಒಟ್ಟು 7,525 ಚೆಕ್ ಅಮಾನ್ಯ ಪ್ರಕರಣಗಳು ಬಾಕಿ ಇದ್ದು, ನ್ಯಾಯಾಧೀಶರ ಸಮ್ಮುಖದಲ್ಲಿ ಅವುಗಳನ್ನು ಅಂದೇ ಇತ್ಯರ್ಥಪಡಿಸಿಕೊಂಡು ಅಂತಿಮ ಆದೇಶ ಪಡೆಯಬಹುದು ಎಂದು ತಿಳಿಸಿದರು.
"

ಮಾದಕ ದ್ರವ್ಯಗಳ ದುರುಪಯೋಗ ತಡೆಗಟ್ಟಲು ಮತ್ತು ಜನರಲ್ಲಿ ಅರಿವು ಮೂಡಿಸಲು ವಿಶೇಷ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಅರಣ್ಯೀಕರಣ ಮತ್ತು ಕೆರೆಗಳ ಪುನರುಜ್ಜೀವನಕ್ಕಾಗಿ ಬೆಂಗಳೂರಿನ ಧರೆ ಫೌಂಡೇಷನ್ ಜತೆ ಒಪ್ಪಂದ ಮಾಡಿಕೊಂಡು ಬೆಂಗಳೂರು ಸುತ್ತಮುತ್ತ 2 ಕೋಟಿ ಹಾಗೂ ಶಿವಮೊಗ್ಗ ಸೇರಿ ಇತರ ಜಿಲ್ಲೆಗಳಲ್ಲಿ 3 ಕೋಟಿ ಸಸಿ ನೆಟ್ಟು, 5 ವರ್ಷ ಪ್ರಾಧಿಕಾರದಿಂದ ಪೋಷಿಸಲಾಗುವುದು.

ಜಿ.ಎ.ಮಂಜುನಾಥ್, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ