ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾಧಿಕಾರಿ.
- ಬರ ಘೋಷಣೆಗೆ ಮಾರ್ಗಸೂಚಿಯ ತೊಡಕು
- ಜಿಲ್ಲೆಯಲ್ಲಿ ಶೇ.28ರಷ್ಟು ಮಾತ್ರ ಬಿತ್ತನೆ
- ಡಿಸಿ ಪ್ರಭುಲಿಂಗ ಕವಳಿಕಟ್ಟಿ ಹೇಳಿಕೆ
ಶಿವಮೊಗ್ಗ: ಜಿಲ್ಲೆಯಲ್ಲಿ ಇದುವರೆಗೆ ಶೇ.44ರಷ್ಟು ಮಳೆ (rain) ಕೊರತೆ ಉಂಟಾಗಿದೆ. ಹಾಗೆಂದ ಮಾತ್ರಕ್ಕೆ ಜಿಲ್ಲೆಯ ಯಾವುದೇ ತಾಲೂಕನ್ನು ಬರಪೀಡಿತ (droght) ಎಂದು ಘೋಷಿಸಲು ಮಾರ್ಗಸೂಚಿಯ (guideline) ತೊಡಕು ಎದುರಾಗಿದೆ.
ಯಾವುದೇ ಪ್ರದೇಶ ಬರಪೀಡತವೆಂದು ಘೋಷಿಸಲು ಅಲ್ಲಿ ವಾಡಿಕೆಗಿಂತ ಶೇ.60ರಷ್ಟು ಮಳೆ ಕೊರತೆ ಆಗಿರಬೇಕು. ಸತತ ಮೂರು ವಾರ ಅಲ್ಲಿ ಮಳೆ ಬಿದ್ದಿರಬಾರದು. ಹೀಗಾಗಿ ಸದ್ಯಕ್ಕೆ ಬರಪೀಡಿತವೆಂದು ಘೋಷಣೆ ಸಾಧ್ಯವಿಲ್ಲ. ಮುಂದಿನ ದಿನಗಳ ಬೆಳವಣಿಗೆ ಗಮನಿಸಿ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಲಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಈಗಾಗಲೇ ಮುಖ್ಯಮಂತ್ರಿಗಳು ಅಧಿಕಾರಿಗಳ ಸಭೆ ನಡೆಸಿ ಸೂಕ್ತ ನಿರ್ದೇಶನ ನೀಡಿದ್ದಾರೆ. ಆ ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ ಇದುವರೆಗೆ ಶೇ.28ರಷ್ಟು ಬಿತ್ತನೆ ಕಾರ್ಯ ಮುಕ್ತಾಯವಾಗಿದೆ ಎಂದರು.
ಮೆಕ್ಕೆಜೋಳ ಬಿತ್ತನೆ ಹೆಚ್ಚಿನ ಪ್ರಮಾಣದಲ್ಲಿ ಆಗಿದೆ. ಆದರೆ ಸಕಾಲದಲ್ಲಿ ಮಳೆ ಬೀಳದ ಕಾರಣ ಬೆಳೆ ನಿರೀಕ್ಷಿತ ಪ್ರಮಾಣದಲ್ಲಿಲ್ಲ. ಬದಲಾದ ಹವಾಗುಣದಿಂದ ಕೀಟದ ಕಾಟವೂ ಎದುರಾಗಿದೆ. ಭತ್ತ ಬಿತ್ತನೆಗೆ ಆಗಸ್ಟ್ ಅಂತ್ಯದವರೆಗೂ ಅವಕಾಶ ಇರುವುದರಿಂದ ಈಗಲೇ ಯಾವುದೇ ತೀರ್ಮಾನ ಕೈಗೊಳ್ಳುವುದು ಸಾಧ್ಯವಿಲ್ಲ ಎಂದು ಹೇಳಿದರು.
ಶಿಕಾರಿಪುರ, ಸೊರಬ ಹಾಗೂ ಸಾಗರ ತಾಲೂಕಿನ ಗ್ರಾಮೀಣ ಭಾಗದಲ್ಲಿ ಈಗಾಗಲೇ ಪ್ರವಾಸ ಮಾಡಿ ಅಲ್ಲಿನ ಪರಿಸ್ಥಿತಿ ಅವಲೋಕಿಸಲಾಗಿದೆ. ಸಹಜವಾಗಿ ನಮ್ಮ ಜಿಲ್ಲೆಯಲ್ಲಿ ವಾಡಿಕೆ ಮಳೆಯ ಪ್ರಮಾಣ ಹೆಚ್ಚಾಗಿರುವುದರಿಂದ ಕೊರತೆಯೂ ಹೆಚ್ಚಿದೆ. ಇನ್ನೂ ಮಳೆಗಾಲ ಇರುವುದರಿಂದ ಕೊಂಚ ಆಶಾಭಾವನೆಯೂ ಇದೆ ಎಂದು ತಿಳಿಸಿದರು.
ರಸಗೊಬ್ಬರ ಕೊರತೆಯಿಲ್ಲ
ಕೃಷಿ ಕೆಲಸ ಸಮರೋಪಾದಿಯಲ್ಲಿ ನಡೆಯುತ್ತಿರುವುದರಿಂದ ರಸಗೊಬ್ಬರ ಸಮಸ್ಯೆ ಕಾಣುತ್ತಿಲ್ಲ. ಬೇಡಿಕೆಗೆ ತಕ್ಕಂತೆ ದಾಸ್ತಾನು ಇದೆ. ಎಫ್‌ಐಡಿ ಮಾರ್ಗಸೂಚಿ ಪ್ರಕಾರ ರಸಗೊಬ್ಬರ ವಿತರಣೆ ಮಾಡುತ್ತಿರುವುದರಿಂದ ಕೆಲವು ರೈತರಿಗೆ ಸಮಸ್ಯೆಯಾಗಿದೆ. ಅವರ ಕೃಷಿ ಕಾರ್ಯಕ್ಕೆ ಅಗತ್ಯವಿರುವಷ್ಟು ರಸಗೊಬ್ಬರ ನೀಡುತ್ತಿಲ್ಲ ಎಂಬ ದೂರುಗಳ ಬಗ್ಗೆ ಪರಿಶೀಲಿಸಲಾಗುವುದು. ಈಗ ಅಗತ್ಯವಿರುವವರಿಗೆ ಪೂರ್ಣ ಪ್ರಮಾಣದಲ್ಲಿ ಗೊಬ್ಬರ ವಿತರಣೆ ಮಾಡುವಂತೆ ಸಂಬಂಧಪಟ್ಟವರಿಗೆ ಸೂಚಿಸಲಾಗುವುದು ಎಂದು ಪ್ರಭುಲಿಂಗ ಕವಳಿಕಟ್ಟಿ ಭರವಸೆ ನೀಡಿದರು.
ಮಳೆ ಮಾಪನ ಕೇಂದ್ರ ದುರಸ್ತಿ
ಜಿಲ್ಲೆಯಲ್ಲಿ ಒಟ್ಟು 280 ಮಳೆ ಮಾಪನ ಕೇಂದ್ರಗಳಿವೆ. 2026ರ ಜನವರಿ ಸಂದರ್ಭದಲ್ಲಿ 208 ಕೇಂದ್ರಗಳು ದುರಸ್ತಿಯಲ್ಲಿದ್ದವು. ಕೇವಲ 72 ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದವು. ಈಗ 185 ಕೇಂದ್ರಗಳನ್ನು ಸರಿಪಡಿಸಲಾಗಿದೆ. ಉಳಿದ ಮಳೆ ಮಾಪನ ಕೇಂದ್ರಗಳನ್ನು 15 ದಿನಗಳೊಳಗೆ ರಿಪೇರಿ ಮಾಡಿಸಲಾಗುವುದು. ಮಳೆ ಮಾಪನ ಕೇಂದ್ರಗಳಲ್ಲಿ ಸಮಸ್ಯೆ ಉಂಟಾದ ಕಾರಣದಿಂದ ಕಳೆದ ವರ್ಷ ಬೆಳೆ ವಿಮೆ ವಿತರಣೆಗೆ ಸಮಸ್ಯೆಯಾಗಿತ್ತು. ರೈತರು ನಷ್ಟ ಅನುಭವಿಸುವಂತಾಗಿತ್ತು. ಹೀಗಾಗಿ ಈಗಾಗಲೇ ಸರ್ಕಾರದ ಮಟ್ಟದಲ್ಲಿ ಬೆಳೆ ವಿಮೆ ಕಂಪನಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. ರೈತರಿಗೆ ಹೆಚ್ಚಿನ ಪರಿಹಾರ ನೀಡುವಂತೆ ಸೂಚಿಸಲಾಗಿದೆ. ಈ ವರ್ಷ ಏಪ್ರಿಲ್ ಹಾಗೂ ಮೇನಲ್ಲಿ ಅಕಾಲಿಕ ಮಳೆ ಹಾಗೂ ಗಾಳಿಯಿಂದ ನಷ್ಟ ಅನುಭವಿಸಿದ ಶಿವಮೊಗ್ಗ ಗ್ರಾಮಾಂತರ ಹಾಗೂ ಭದ್ರಾವತಿ ತಾಲೂಕಿನ ರೈತರಿಗೆ ಮಾರ್ಗಸೂಚಿ ಪ್ರಕಾರ ಪರಿಹಾರ ವಿತರಣೆಯಾಗಿದೆ. ಆದರೆ ಅವರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂಬುದು ರೈತ ಮುಖಂಡರು ಹಾಗೂ ಜನಪ್ರತಿನಿಧಿಗಳ ಒತ್ತಾಯವಾಗಿತ್ತು. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಬೇಕಿದೆ ಎಂದು ಪ್ರಭುಲಿಂಗ ಕವಳಿಕಟ್ಟಿ ವಿವರಿಸಿದರು.