ಶಿರಾಳಕೊಪ್ಪ ಸಮೀಪದ ಉಡುಗಣಿಯಲ್ಲಿ ಅನಧಿಕೃತವಾಗಿ ಸಂಗ್ರಹಿಸಿದ್ದ ಯೂರಿಯಾ ರಸಗೊಬ್ಬರ. ಕೃಷಿ ಇಲಾಖೆ ಅಧಿಕಾರಿ ಕಿರಣ್‌ಕುಮಾರ್ ಹರ್ತಿ ಮತ್ತು ಸಿಬ್ಬಂದಿ ಇದ್ದಾರೆ.
ಶಿರಾಳಕೊಪ್ಪ: ಸಮೀಪದ ಉಡುಗಣಿ ಗ್ರಾಮದ ಸರ್ವೆ ನಂ. 74/2ರಲ್ಲಿ ಅನಧಿಕೃತವಾಗಿ ಸಂಗ್ರಹಿಸಿದ್ದ 425 ಚೀಲ ಯೂರಿಯಾ ರಸಗೊಬ್ಬರವನ್ನು ಕೃಷಿ ಇಲಾಖೆ ಅಧಿಕಾರಿಗಳು ಮಂಗಳವಾರ ವಶಪಡಿಸಿಕೊಂಡಿದ್ದಾರೆ.
ಬೆಂಗಳೂರಿನ ಕೃಷಿ ಇಲಾಖೆಯ ಕೇಂದ್ರ ಕಚೇರಿಗೆ ಬಂದ ದೂರಿನ ಮೇರೆಗೆ ಮೇಲಧಿಕಾರಿಗಳ ಸೂಚನೆಯಂತೆ ಅಧಿಕಾರಿಗಳು ಶಿಕಾರಿಪುರ ತಾಲೂಕಿನ ಉಡುಗಣಿ ಗ್ರಾಮದ ಪೂರ್ವ ಭಾಗದಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸಂಬಂಧಿಸಿದ ಜಮೀನಿನ ರೈತರನ್ನು ವಿಚಾರಿಸಿದಾಗ, ಯಾವುದೇ ಕೃಷಿ ಚಟುವಟಿಕೆ ಕೈಗೊಂಡಿಲ್ಲ ಹಾಗೂ ರಸಗೊಬ್ಬರ ದಾಸ್ತಾನು ಬಗ್ಗೆ ಮಾಹಿತಿ ಇಲ್ಲವೆಂದು ತಿಳಿಸಿದ್ದಾರೆ. ಕೂಲಂಕಷವಾಗಿ ಪರಿಶೀಲಿಸಿದಾಗ ತಲಾ 45 ಕೆ.ಜಿ ತೂಕದ 425 ಯೂರಿಯಾ ಚೀಲಗಳು ಪತ್ತೆಯಾಗಿವೆ. ರಸಗೊಬ್ಬರ ನಿಯಂತ್ರಣ ಆದೇಶ ಹಾಗೂ ಅಗತ್ಯ ವಸ್ತುಗಳ ಕಾಯ್ದೆ ಅನ್ವಯ ಯೂರಿಯಾ ರಸಗೊಬ್ಬರವನ್ನು ಅಧಿಕೃತ ಮಾರಾಟಗಾರರ ಗೋದಾಮುಗಳಲ್ಲಿ ಮಾತ್ರ ಸಂಗ್ರಹಿಸಬೇಕು. ಖರೀದಿ ಬಿಲ್ ಹಾಗೂ ಬೆಳೆ ಬೆಳೆಯುತ್ತಿರುವ ಜಮೀನಿನ ಮಾಹಿತಿ ಇರಬೇಕು. ಆದರೆ ನಿಯಮ ಉಲ್ಲಂಘಿಸಿರುವುದರಿಂದ ಮುಟ್ಟುಗೋಲು ಹಾಕಲಾಗಿದೆ. ವಶಪಡಿಸಿಕೊಂಡ ಯೂರಿಯಾವನ್ನು ಶಿರಾಳಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸುಪರ್ದಿಗೆ ನೀಡಲಾಗಿದೆ.