ಪ್ರಭುಲಿಂಗ ಕವಳಿಕಟ್ಟಿ ಸುದ್ದಿಗೋಷ್ಠಿಯಲ್ಲಿ ಎಸ್‌ಐಆರ್ ಕರಡುಪಟ್ಟಿ ಕುರಿತು ಮಾಹಿತಿ ನೀಡಿದರು. ವಿ.ಅಭಿಷೇಕ್, ಡಾ.ಎಚ್‌ಪಿಎಸ್ ಮೈತ್ರಿ, ಮಂಜುಳಾ ಹೆಗಡಾಳ್ ಇದ್ದರು. 
ಶಿವಮೊಗ್ಗ

ಶಿವಮೊಗ್ಗದಲ್ಲಿ 1.88 ಲಕ್ಷ ಮತದಾರರು ಲಿಸ್ಟ್‌ನಿಂದ ಹೊರಕ್ಕೆ I voters out from list

ಪ್ರಮುಖ ಮುಖ್ಯಾಂಶಗಳು

  • ಎಸ್‌ಐಆರ್‌ನಲ್ಲಿ ಉಳಿದವರು 13,30,905 ಜನ
  • ಜಿಲ್ಲಾ ಚುನಾವಣಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಾಹಿತಿ
  • ಸೆ. 23ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ
ಶಿವಮೊಗ್ಗ: ಮತದಾರರ (voters) ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್) (sir) ಪ್ರಕ್ರಿಯೆಯ ಎರಡನೇ ಭಾಗವಾಗಿ ಮತದಾರರ ಕರಡು (draft) ಪಟ್ಟಿ ಪ್ರಕಟಗೊಂಡಿದ್ದು, ಜಿಲ್ಲೆಯ 15,19,459 ಮತದಾರರ ಪೈಕಿ 1,88, 554 ಮಂದಿಯನ್ನು ಕೈಬಿಡಲಾಗಿದೆ. ಮತದಾರರ ಕರಡು ಪಟ್ಟಿಯಲ್ಲಿ 13,30,905 ಮತದಾರರು ಉಳಿದುಕೊಂಡಿದ್ದಾರೆ.
ಕೈಬಿಟ್ಟ ಮತದಾರರ ಪೈಕಿ ಎಎಸ್‌ಡಿಒ (ಮೃತಪಟ್ಟವರು, ಶಾಶ್ವತವಾಗಿ ಸ್ಥಳಾಂತರಗೊಂಡವರು, ಎರಡು ಕಡೆಗಳಲ್ಲಿ ಹೆಸರು ಹೊಂದಿರುವವರು) ಹೊರತುಪಡಿಸಿ 2002ರ ಮತದಾರರ ಪಟ್ಟಿ ಮ್ಯಾಪಿಂಗ್ ಪ್ರಕ್ರಿಯೆಗೆ ಒಳಪಡದವರು ಹಾಗೂ ಅಸಹಜ ಪ್ರಕರಣಗಳ ವ್ಯಾಪ್ತಿಗೆ ಒಳಪಡುವ 48,668 ಮಂದಿಯಿಂದ ಆಕ್ಷೇಪಣೆ ಸ್ವೀಕರಿಸುವ ಪ್ರಕ್ರಿಯೆ ಸೆ. 23ರವರೆಗೆ ನಡೆಯಲಿದೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಚುನಾವಣಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಮತದಾರರ ಕರಡು ಪಟ್ಟಿಯನ್ನು ಆಯಾ ಮತಗಟ್ಟೆ, ಸಂಬಂಧಪಟ್ಟ ಗ್ರಾಪಂ, ಪಟ್ಟಣ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ. ಮತದಾರರು ಪರಿಶೀಲಿಸಿ ಆಕ್ಷೇಪಣೆಗಳನ್ನು ಸಲ್ಲಿಸಬಹುದು ಎಂದು ಹೇಳಿದರು.
48,668 ಮಂದಿಗೆ ಅಂಚೆ ಮೂಲಕ ನೋಟಿಸ್ ತಲುಪಿಸಲಾಗುವುದು. ಅವರು ನಿಗಧಿತ ದಿನದಂದು ಸ್ಥಳೀಯ ಸಂಸ್ಥೆಗಳಲ್ಲಿರುವ ಸಹಾಯಕ ಚುನಾವಣಾ ನೋಂದಣಾಧಿಕಾರಿಯನ್ನು ಭೇಟಿಯಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಅವಕಾಶವಿದೆ. ಇದಕ್ಕೆಂದು ಹೆಚ್ಚುವರಿಯಾಗಿ 266 ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್, ಚುನಾವಣಾ ತಹಸೀಲ್ದಾರ್ ಮಂಜುಳಾ ಹೆಗಡಾಳ್, ಶಿವಮೊಗ್ಗ ಉಪವಿಭಾಗಾಧಿಕಾರಿ ಡಾ. ಎಚ್‌ಪಿಎಸ್ ಮೈತ್ರಿ ಸುದ್ದಿಗೋಷ್ಠಿಯಲ್ಲಿದ್ದರು.

ಮರು ಸೇರ್ಪಡೆ ಹೇಗೆ?

ಜಿಲ್ಲೆಯಲ್ಲಿ 15,164 ಮಂದಿ ಮ್ಯಾಪಿಂಗ್‌ಗೆ ಒಳಪಟ್ಟಿಲ್ಲ. ಇವರು ಆಕ್ಷೇಪಣೆ ಸಲ್ಲಿಸುವ ಸಂದರ್ಭದಲ್ಲಿ 2002ರ ಮತಪಟ್ಟಿಯಲ್ಲಿದ್ದ ತಂದೆ, ತಾಯಿ, ತಾತ, ಪತಿ ಅಥವಾ ಪತ್ನಿ ಮಾಹಿತಿ ಒದಗಿಸಬೇಕು. 33,504 ಮತದಾರರ ಹೆಸರು, ತಂದೆ ಹಾಗೂ ಮಗನ ನಡುವಿನ ವಯಸ್ಸಿನಲ್ಲಿ ವ್ಯತ್ಯಾಸ ಹೀಗೆ ಅನೇಕ ಅಸಹಜತೆಗಳು ಕಂಡುಬಂದಿವೆ. ಇವರು ಚುನಾವಣಾ ಆಯೋಗ ಸೂಚಿಸಿರುವ ದಾಖಲೆಗಳ ಪೈಕಿ ಯಾವುದಾದರೂ ಒಂದು ದಾಖಲೆ ಒದಗಿಸಬೇಕು. ಇನ್ನು ಮುಂದೆ ಹೆಸರು ಸೇರ್ಪಡೆ, ತಿದ್ದುಪಡಿಗೂ ಅವಕಾಶವಿದೆ. ಇದಕ್ಕೆ ಸಂಬಂಧಿಸಿದ ಅರ್ಜಿ ನಮೂನೆ ನೀಡಿ ಸೇವೆ ಪಡೆದುಕೊಳ್ಳಬಹುದು.

ಪ್ರಕ್ರಿಯೆಯಲ್ಲಿ ಪ್ರಮುಖ ಅಂಶಗಳು

ಮತದಾರರು(ಜೂ.16ರಲ್ಲಿ), 1519459
ಸಾವನ್ನಪ್ಪಿದ ಮತದಾರರು, 46683
ಪತ್ತೆಯಾಗದವರು, 23165
ಶಾಶ್ವತವಾಗಿ ಸ್ಥಳಾಂತರ 99225
ಬೇರೆಡೆ ನೋಂದಣಿ, 19481
ಕರಡು ಪಟ್ಟಿಯಲ್ಲಿ ಮತದಾರರು, 1330905

ಮತಗಟ್ಟೆಯಲ್ಲಿ ಹೆಚ್ಚಳ

ಎಸ್‌ಐಆರ್ ಪ್ರಕ್ರಿಯೆ ಜತೆಗೆ ಮತಗಟ್ಟೆಗಳ ಪರಿಷ್ಕರಣೆಯೂ ನಡೆದಿದೆ. ಜಿಲ್ಲೆಯಲ್ಲಿ ಹಿಂದೆ 1,793 ಮತಗಟ್ಟೆಗಳಿದ್ದವು. ಈಗ ಅವುಗಳ ಸಂಖ್ಯೆ 1,886ಕ್ಕೆ ಏರಿಕೆಯಾಗಿದೆ. ಯಾವುದೇ ಮತಗಟ್ಟೆಯಲ್ಲಿ ಮತದಾರರ ಸಂಖ್ಯೆ 1,200ಕ್ಕೂ ಹೆಚ್ಚು ಇರಬಾರದು. ಜನರು ಮತದಾನಕ್ಕೆಂದು ಹೆಚ್ಚು ದೂರ ಹೋಗುವಂತೆ ಆಗಬಾರದು ಎಂಬ ಚುನಾವಣಾ ಆಯೋಗದ ನಿರ್ದೇಶನವನ್ನು ಗಮನದಲ್ಲಿರಿಸಿ ಮತಗಟ್ಟೆಗಳ ಪರಿಷ್ಕರಣೆ ಮಾಡಲಾಗಿದೆ ಎಂದು ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದರು.

ಸಂಪೂರ್ಣ ಪಾರದರ್ಶಕ

ಜಿಲ್ಲೆಯಲ್ಲಿ ಎಸ್‌ಐಆರ್ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿ ನಡೆದಿದೆ. ರಾಜಕೀಯ ಪಕ್ಷಗಳ ಮುಖಂಡರಿಗೂ ಎಎಸ್‌ಡಿಒ ಮತದಾರರು, ಮ್ಯಾಪಿಂಗ್‌ಗೆ ಒಳಪಡದವರು, ಅಸಹಜ ಪ್ರಕರಣಗಳ ಬಗ್ಗೆ ಕಾಲದಿಂದ ಕಾಲಕ್ಕೆ ಮಾಹಿತಿ ನೀಡಲಾಗಿತ್ತು. ರಾಜಕೀಯ ಪಕ್ಷಗಳನ್ನು ಪ್ರತಿನಿಧಿಸುವ ಬಿಎಲ್‌ಎಗಳು ಕೂಡ ಬೇರುಮಟ್ಟದಲ್ಲಿ ಪರಿಶೀಲಿಸಿ ನಮ್ಮ ಮಾಹಿತಿಯನ್ನು ಒಪ್ಪಿಕೊಂಡಿದ್ದಾರೆ. ಇನ್ನು ಮುಂದೆ ಬರುವ ಆಕ್ಷೇಪಣೆಗಳನ್ನೂ ಅತ್ಯಂತ ಸೂಕ್ಷ್ಮ ಹಾಗೂ ಪಾರದರ್ಶಕವಾಗಿ ಪರಿಶೀಲನೆ ನಡೆಸಲಾಗುವುದು. ಅರ್ಹ ಮತದಾರರು ಮತ ಚಲಾಯಿಸುವ ಹಕ್ಕಿನಿಂದ ಹೊರಗುಳಿಯಬಾರದು. ಅನರ್ಹರಿಗೆ ಅವಕಾಶ ಸಿಗಬಾರದು ಎಂಬುದಷ್ಟೇ ಆಯೋಗದ ಉದ್ದೇಶವಾಗಿದೆ ಎಂದು ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.

ಯಾವುದೇ ದೂರು ಬಂದಿಲ್ಲ

ಎಸ್‌ಆರ್‌ಪ್ರಕ್ರಿಯೆಗೆ ಸಂಬಂಧಿಸಿ ಈವರೆಗೆ ಯಾವುದೇ ದೂರುಗಳು ಬಂದಿಲ್ಲ. ಅತ್ಯಂತ ವ್ಯವಸ್ಥಿತವಾಗಿ ಪ್ರಕ್ರಿಯೆ ನಡೆಯುತ್ತಿದೆ ಎಂಬುದು ಸಾರ್ವಜನಿಕರ ಅರಿವಿಗೆ ಬಂದಿದೆ. ಮತದಾರರ ಪಟ್ಟಿಯಲ್ಲಿರುವ ಮತದಾರರ ಭೇಟಿಗೆ ಬಿಎಲ್‌ಒಗಳು ನಿರಂತರ ಪ್ರಯತ್ನ ನಡೆಸಿದ್ದಾರೆ. ಅಸಹಜ ಪ್ರಕರಣಗಳ ಪತ್ತೆಗೂ ಶ್ರಮಿಸಿದ್ದಾರೆ. ಸಾರ್ವಜನಿಕರಿಂದಲೂ ಅಧಿಕಾರಿಗಳ ಕೆಲಸಕ್ಕೆ ಉತ್ತಮ ಬೆಂಬಲ ಸಿಕ್ಕಿದೆ ಎಂದು ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.