ಶಿವಮೊಗ್ಗ ತಾಲೂಕಿನಲ್ಲಿ ಅಕ್ರಮ ಮರಳು ಅಡ್ಡೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ವಾಹನಗಳನ್ನು ಜಪ್ತ್ತಿ ಮಾಡಿದರು.
- ಅಕ್ರಮ ಮರಳು ಗಣಿಗಾರಿಕೆ, ಸಾಗಣೆ ಮತ್ತು ಸಂಗ್ರಹದ 25 ಅಡ್ಡೆಗಳ ಮೇಲೆ ದಾಳಿ
- 15 ತಂಡಗಳ ಮೂಲಕ ಏಕಕಾಲಕ್ಕೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು
- ಜೆಸಿಬಿ, ಹಿಟಾಚಿ, ಟಿಪ್ಪರ್ ಲಾರಿ, ಟ್ರ್ಯಾಕ್ಟರ್ ಸೇರಿ 52 ವಾಹನ ಮತ್ತು ಪರಿಕರ ವಶ
ಶಿವಮೊಗ್ಗ: ಜಿಲ್ಲಾದ್ಯಂತ ಅಕ್ರಮವಾಗಿ ನಡೆಯುತ್ತಿದ್ದ ಮರಳು ಗಣಿಗಾರಿಕೆ(Sand mining), ಸಾಗಣೆ ಮತ್ತು ಸಂಗ್ರಹದ 25 ಅಡ್ಡೆಗಳ ಮೇಲೆ 15 ತಂಡಗಳ ಮೂಲಕ ಶನಿವಾರ ಏಕಕಾಲಕ್ಕೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು 17 ಸಾವಿರ ಮೆಟ್ರಿಕ್ ಟನ್ ಮರಳು ಹಾಗೂ 50ಕ್ಕೂ ಅಧಿಕ ವಾಹನಗಳನ್ನು ಜಪ್ತಿ ಮಾಡಿದ್ದಾರೆ.
ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿ, ಸಾಗರ ಮತ್ತು ಹೊಸನಗರ ತಾಲೂಕುಗಳಲ್ಲಿ ಹರಿಯುವ ತುಂಗಭದ್ರಾ ಮತ್ತು ಶರಾವತಿ ನದಿ ಪಾತ್ರದ ಸ್ಥಳಗಳಲ್ಲಿ ವ್ಯಾಪಕವಾಗಿ ಅಕ್ರಮ ಮರಳು(Illegal sand) ದಂಧೆ ನಡೆಯುತ್ತಿರುವ ಕುರಿತು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದರು. ಈ ಸಂಬಂಧ ಸ್ಥಳ ಪರಿಶೀಲನೆ ನಡೆಸಲು ಹಾಗೂ ಶಿವಮೊಗ್ಗದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿಗಳ ಕಚೇರಿಯ ದಾಖಲಾತಿ ಪರಿಶೀಲಿಸುವಂತೆ ಆದೇಶಿಸಿದ್ದರು.
ಲೋಕಾಯುಕ್ತ ಆದೇಶ(Lokayukta order)ದ ಹಿನ್ನೆಲೆಯಲ್ಲಿ ಶಿವಮೊಗ್ಗ ಲೋಕಾಯುಕ್ತ ಎಸ್‌ಪಿ ಎಂ.ಎಸ್.ಕೌಲಾಪುರೆ ಹಾಗೂ ಡಿವೈಎಸ್‌ಪಿ ಬಿ.ಪಿ.ಚಂದ್ರಶೇಖರ್ ಅವರ ಮಾರ್ಗದರ್ಶನ ಮತ್ತು ಮೇಲ್ವಿಚಾರಣೆಯಲ್ಲಿ ಬೃಹತ್ ತಂಡವನ್ನು ರಚಿಸಲಾಗಿತ್ತು. ಕರ್ನಾಟಕ ಲೋಕಾಯುಕ್ತದ ವಿವಿಧ ಘಟಕಗಳನ್ನೊಳಗೊಂಡ 15 ಪ್ರತ್ಯೇಕ ತಂಡಗಳು ಜಿಲ್ಲೆಯ 25ಕ್ಕೂ ಹೆಚ್ಚು ಅಕ್ರಮ ಮರಳು ತಾಣಗಳ ಮೇಲೆ ಶನಿವಾರ ಏಕಕಾಲದಲ್ಲಿ ದಾಳಿ ನಡೆಸಿರುವುದು ಜಿಲ್ಲೆಯ ಇತಿಹಾಸದಲ್ಲೇ ಇದೇ ಮೊದಲು.
ಕೋಟ್ಯಂತರ ರೂ. ಮೌಲ್ಯದ ಮರಳು, ವಾಹನ ಜಪ್ತಿ
ಕಾರ್ಯಾಚರಣೆಯಲ್ಲಿ 17 ಸಾವಿರ ಮೆಟ್ರಿಕ್ ಟನ್(metric ton)(ಅಂದಾಜು 1700ಕ್ಕೂ ಅಧಿಕ ಲಾರಿ ಲೋಡ್) ಅಕ್ರಮ ಮರಳು ಸಂಗ್ರಹವನ್ನು ಲೋಕಾಯುಕ್ತ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಇದರೊಂದಿಗೆ ಮರಳು ಗಣಿಗಾರಿಕೆ ಮತ್ತು ಸಾಗಣೆಗೆ ಬಳಸಲಾಗುತ್ತಿದ್ದ ಜೆಸಿಬಿ, ಹಿಟಾಚಿ, ಟಿಪ್ಪರ್ ಲಾರಿಗಳು, ಟ್ರ್ಯಾಕ್ಟರ್‌ಗಳು, ಬೋಟ್‌ಗಳು ಹಾಗೂ ಮರಳು ಫಿಲ್ಟರ್ ಮಾಡುವ ಯಂತ್ರಗಳು ಸೇರಿ ಒಟ್ಟು 52 ವಾಹನ ಮತ್ತು ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ. ಶಿವಮೊಗ್ಗದ ಹಿರಿಯ ಭೂ ವಿಜ್ಞಾನಿಗಳು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಚೇರಿ ಮೇಲೂ ಶೋಧನಾ ವಾರೆಂಟ್ ಅಡಿ ಲೋಕಾಯುಕ್ತ ಅಧಿಕಾರಿಗಳು(Lokayukta officials) ದಾಳಿ ನಡೆಸಿ, ಕಚೇರಿಯ ಪ್ರಮುಖ ದಾಖಲೆಗಳನ್ನು ತೀವ್ರ ಪರಿಶೀಲನೆಗೆ ಒಳಪಡಿಸಿದ್ದಾರೆ.
ಜಂಟಿ ಕ್ರಮಕ್ಕೆ ಲೋಕಾ ಸೂಚನೆ
ಅಕ್ರಮ ಮರಳು ದಂಧೆಯಲ್ಲಿ ತೊಡಗಿರುವವರ ವಿರುದ್ಧ ಕಾನೂನು ರೀತಿ ಕಠಿಣ ಕ್ರಮ ಕೈಗೊಳ್ಳುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಆರ್‌ಟಿಒ, ಅರಣ್ಯ ಇಲಾಖೆ, ಸಹಾಯಕ ಭೂ ದಾಖಲಾತಿ ಇಲಾಖೆ, ಪರಿಸರ ಮಾಲಿನ್ಯ ಮತ್ತು ನಿಯಂತ್ರಣ ಇಲಾಖೆ ಹಾಗೂ ಪಿಡಬ್ಲ್ಯುಡಿ ಇಲಾಖೆಗಳಿಗೆ ಲೋಕಾಯುಕ್ತರು ಸೂಚನೆ ನೀಡಿದ್ದಾರೆ. ಈ ಜಂಟಿ ಕಾರ್ಯಾಚರಣೆಯಲ್ಲಿ ಶಿವಮೊಗ್ಗ ಮಾತ್ರವಲ್ಲದೆ ದಾವಣಗೆರೆ, ಹಾವೇರಿ, ಚಿಕ್ಕಮಗಳೂರು, ಚಿತ್ರದುರ್ಗ ಮತ್ತು ಬೆಳಗಾವಿ ಜಿಲ್ಲೆಗಳ ಲೋಕಾಯುಕ್ತ ಘಟಕಗಳ ಡಿವೈಎಸ್‌ಪಿಗಳು, ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಹಾಗೂ ಸಿಬ್ಬಂದಿ ವರ್ಗದವರು ಸಕ್ರಿಯವಾಗಿ ಭಾಗವಹಿಸಿದ್ದರು.
ಎಲ್ಲೆಲ್ಲಿ ದಾಳಿ ?
ಭದ್ರಾವತಿ ತಾಲೂಕಿನ ಸನ್ಯಾಸಿ ಕೋಡಮಗ್ಗಿ, ನಿಂಬೆಗೊಂದಿ, ಮಂಗೋಟೆ, ಶಿವಮೊಗ್ಗ ತಾಲೂಕಿನ ಕೂಡ್ಲಿ, ಹಾಡೋನಹಳ್ಳಿ, ತೀರ್ಥಹಳ್ಳಿ ತಾಲೂಕಿನ ಮುಂಡಳ್ಳಿ, ತೂದೂರು, ದಬ್ಬಣಗದ್ದೆ, ಹೊಸನಗರ ತಾಲೂಕಿನ ಸುತ್ತಾ ಹರಿದ್ರಾವತಿ, ಸಂಪೆಕಟ್ಟೆ, ಸಾಗರ ತಾಲೂಕಿನ ಆವಿನಹಳ್ಳಿ ಸೇರಿ ಹಲವೆಡೆ ಅಕ್ರಮ ಮರಳು ಸಂಗ್ರಹ ಮತ್ತು ಅಡ್ಡೆಗಳ ಮೇಲೆ ದಾಳಿ ನಡೆಸಲಾಗಿದೆ. ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಣೆ ಕುರಿತು ಸಾಕಷ್ಟು ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ದಾಳಿ ನಡೆದಿದ್ದು, ಇತ್ತೀಚೆಗೆ ನಡೆದ ಕೆಡಿಪಿ ಸಭೆಯಲ್ಲೂ ಈ ವಿಷಯ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.
"
ಕರ್ನಾಟಕ ಲೋಕಾಯುಕ್ತರ ಆದೇಶದ ಮೇರೆಗೆ ಜಿಲ್ಲೆಯ ಹಲವೆಡೆ ದಾಳಿ ನಡೆಸಿ ಅಕ್ರಮ ಮರಳು ಗಣಿಗಾರಿಕೆ, ಸಂಗ್ರಹ ಮತ್ತು ಸಾಗಣೆಯನ್ನು ಪತ್ತೆ ಮಾಡಲಾಗಿದೆ. ಕೋಟ್ಯಂತರ ರೂ. ಮೌಲ್ಯದ ಮರಳು ಮತ್ತು ವಾಹನಗಳನ್ನು ಜಪ್ತಿ ಮಾಡಲಾಗಿದೆ.
— ಎಂ.ಎಸ್.ಕೌಲಾಪುರೆ, ಶಿವಮೊಗ್ಗ ಲೋಕಾಯುಕ್ತ ಎಸ್‌ಪಿ