- ಇಂಟರೆಸ್ಟ್ ಸಬ್ಸಿಡಿ ಆಮಿಷವೊಡ್ಡಿ ಮೋಸ
- ಉದ್ಯಮಿ, ರೈತರಿಬ್ಬರೂ ವಂಚನೆಗೆ ಬಲಿ
- ಶಿವಮೊಗ್ಗ ಗ್ರಾಮಾಂತರ, ಸಿಇಎನ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ
ಶಿವಮೊಗ್ಗ: ಪ್ರತ್ಯೇಕ ಮೂರು ಪ್ರಕರಣ(Three separate cases)ಗಳಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ ಉದ್ಯಮಿ ಸೇರಿ ಮೂವರಿಗೆ 16.16 ಲಕ್ಷ ರೂ. ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಶಿವಮೊಗ್ಗ ಗ್ರಾಮಾಂತರ ಠಾಣೆ ಹಾಗೂ ಸಿಇಎನ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ.
ಮಾಜಿ ಸಚಿವರೊಬ್ಬರ ಆಪ್ತ ಕಾರ್ಯದರ್ಶಿ(Private Secretary) ಹೆಸರಲ್ಲಿ ವ್ಯಕ್ತಿಯೊಬ್ಬ ಸಮಾಜ ಕಲ್ಯಾಣ ಇಲಾಖೆ(Social Welfare Department)ಯಡಿ ಸಾಲ ಕೊಡಿಸುವುದಾಗಿ ನಂಬಿಸಿ ಉದ್ಯಮಿಗೆ 7.50ಲಕ್ಷ ರೂ. ಪಡೆದು ವಂಚಿಸಿದ್ದಾನೆ. ತುಮಕೂರು ಮೂಲದ ವ್ಯಕ್ತಿಯೊಬ್ಬ ತಾನು ಮಾಜಿ ಸಚಿವರೊಬ್ಬರ ಆಪ್ತ ಕಾರ್ಯದರ್ಶಿ ಎಂದು ಪರಿಚಯಿಸಿಕೊಂಡಿದ್ದ.
ತನಗೆ ಹಿರಿಯ ನಾಯಕರು ಹಾಗೂ ಅಧಿಕಾರಿಗಳ ಪರಿಚಯವಿದ್ದು, ಸಮಾಜ ಕಲ್ಯಾಣ ಇಲಾಖೆಯ ಇಂಟರೆಸ್ಟ್ ಸಬ್ಸಿಡಿ ಸ್ಕೀಮ್(Interest Subsidy Scheme) ಅಡಿಯಲ್ಲಿ 1.45ಕೋಟಿ ರೂ. ಸಾಲ ಮಂಜೂರು ಮಾಡಿಸಿಕೊಡುವುದಾಗಿ ನಂಬಿಸಿದ್ದ. ಸಾಲದ ಹಣವನ್ನು ಸರ್ಕಾರಕ್ಕೆ ವಾಪಸ್ ನೀಡುವ ಅಗತ್ಯವಿಲ್ಲ ಎಂದು ಉದ್ಯಮಿಗೆ ತಿಳಿಸಿದ್ದ. ಸಾಲ ಮಂಜೂರಾತಿಗೆ ಅಧಿಕಾರಿಗಳಿಗೆ ನೀಡಬೇಕೆಂದು ಹೇಳಿ ಶಿವಮೊಗ್ಗದ ಉದ್ಯಮಿಯ ಅಂಗಡಿ(Shimoga Businessman's shop)ಯಲ್ಲಿ ಹಂತ ಹಂತವಾಗಿ 1,05,200 ರೂ. ಅನ್ನು ನಗದಾಗಿ ಪಡೆದಿದ್ದನು. ಆನಂತರ 2025ರ ಆಗಸ್ಟ್‌ನಿಂದ ಡಿಸೆಂಬರ್‌ವರೆಗಿನ ಅವಧಿಯಲ್ಲಿ ಆನ್‌ಲೈನ್ ಮೂಲಕ 6,44,800 ರೂ. ಸೇರಿ ಒಟ್ಟು 7.50 ಲಕ್ಷ ರೂ. ಪಡೆದುಕೊಂಡಿದ್ದ.
ಹಣ ಪಡೆದ ಬಳಿಕ ಸಾಲದ ಮೊತ್ತ ಖಾತೆಗೆ ಜಮಾ ಆಗುತ್ತದೆಂದು ಸುಳ್ಳು ಹೇಳುತ್ತಾ ಉದ್ಯಮಿಯ ಕರೆಗಳನ್ನು ಸ್ವೀಕರಿಸುತ್ತಿರಲಿಲ್ಲ. ಇದೇ ರೀತಿ ಉದ್ಯಮಿಯ ಪರಿಚಿತರು ಹಾಗೂ ಸ್ನೇಹಿತರಿಗೂ ಸಾಲ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸಿರುವುದು ಬೆಳಕಿಗೆ ಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ(Shivamogga Rural Police Station)ಯಲ್ಲಿ ಪ್ರಕರಣ ದಾಖಲಾಗಿದೆ.
ರೈತರಿಬ್ಬರಿಗೆ ಲಕ್ಷಾಂತರ ರೂ. ವಂಚನೆ
ಮತ್ತೆರಡು ಪ್ರಕರಣಗಳಲ್ಲಿ ರೈತರಿಬ್ಬರಿಗೆ ಕ್ರಮವಾಗಿ 5.95ಲಕ್ಷ ರೂ. ಮತ್ತು 2.69 ಲಕ್ಷ ರೂ. ವಂಚಿಸಲಾಗಿದೆ. 46 ವರ್ಷದ ಹೊಸನಗರ ತಾಲೂಕಿನ ರೈತನಿಗೆ ಪಿಎಂಇಜಿಪಿ(PMEGP)ಯಲ್ಲಿ ವೈಯಕ್ತಿಕ 5 ಲಕ್ಷ ರೂ. ಸಾಲ ನೀಡುವುದಾಗಿ ನಂಬಿಸಿ ವಿವಿಧ ಶುಲ್ಕ ಪಾವತಿಸುವ ನೆಪದಲ್ಲಿ ಹಂತ ಹಂತವಾಗಿ 2,69,800 ರೂ. ಪಡೆದು ವಂಚಿಸಲಾಗಿದೆ.
ಇನ್ನೊಂದು ಪ್ರಕರಣದಲ್ಲಿ 40 ವರ್ಷದ ಶಿವಮೊಗ್ಗ ತಾಲೂಕಿನ ರೈತನಿಗೆ ಮುದ್ರಾ ಯೋಜನೆ(Mudra scheme)ಯಡಿ 10ಲಕ್ಷ ರೂ. ಸಾಲ ನೀಡುವುದಾಗಿ ನಂಬಿಸಿದ್ದ ವಂಚಕರು 5,96,649 ರೂ. ಪಡೆದಿದ್ದಾರೆ. 2026ರ ಏಪ್ರಿಲ್ 30ರಿಂದ ಜೂ.26ರವರೆಗೆ ಹಂತ ಹಂತವಾಗಿ ಲಕ್ಷಾಂತರ ರೂ. ಪಡೆದು ವಂಚಿಸಲಾಗಿದೆ. ಈ ಬಗ್ಗೆ ಶಿವಮೊಗ್ಗ ಸಿಇಎನ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿವೆ.