ಪಿ.ಎಂ.ಮಾಲತೇಶ್, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿರ್ದೇಶಕ
- ಮಂಡಳಿ ಕಾರ್ಯಕ್ಕೆ ಬೇಕಿದೆ ಇನ್ನಷ್ಟು ಪ್ರಚಾರ
- ಪಿ.ಎಂ.ಮಾಲತೇಶ್ ಅಭಿಮತ
ಶಿವಮೊಗ್ಗ: ರಾಜ್ಯ ಬ್ರಾಹ್ಮಣ (brhamna) ಅಭಿವೃದ್ಧಿ ಮಂಡಳಿಯಿಂದ 2025-26ನೇ ಸಾಲಿನಲ್ಲಿ ವಿಪ್ರ (vipra) ನೇರ ಸಾಲ ಯೋಜನೆಗೆ 24 ಕೋಟಿ ರೂ. ಹಾಗೂ ಸಾಂದೀಪಿನಿ ಶಿಷ್ಯ ವೇತನಕ್ಕೆ 5.50 ಕೋಟಿ ರೂ. ಬಳಸಲಾಗಿದೆ ಎಂದು ಮಂಡಳಿ (board) ನಿರ್ದೇಶಕ ಪಿ.ಎಂ.ಮಾಲತೇಶ್ ತಿಳಿಸಿದ್ದಾರೆ.
ವಿಪ್ರ ಸಾಲ ಯೋಜನೆ ಜನಪ್ರಿಯವಾಗಿದೆ. ಇದರಲ್ಲಿ ರಾಜ್ಯಾದ್ಯಂತ 1,333 ಅರ್ಜಿಗಳು ಸಲ್ಲಿಕೆಯಾಗಿದ್ದು, ಅವುಗಳಲ್ಲಿ 38 ಅರ್ಜಿಗಳು ತಿರಸ್ಕೃತವಾಗಿವೆ. 1,295 ಅರ್ಜಿಗಳು ಅಂಗೀಕಾರವಾಗಿವೆ. ಇದುವರೆಗೆ 750 ಅಭ್ಯರ್ಥಿಗಳಿಗೆ ಶೇ.20ರ ಸಹಾಯಧನ ಹಾಗೂ ಶೇ.4ರ ಬಡ್ಡಿ ದರದಲ್ಲಿ ತಲಾ ಎರಡು ಲಕ್ಷ ರೂ. ನೀಡಲಾಗಿದೆ. 2026 ಮಾರ್ಚ್‌ನಲ್ಲಿ ಸಾಲ ಪಡೆದವರು ಜೂನ್‌ನಿಂದ ಹಾಗೂ ಏಪ್ರಿಲ್‌ನಲ್ಲಿ ಸಾಲ ತೆಗೆದುಕೊಂಡವರು ಜುಲೈನಿಂದ ಮರುಪಾವತಿ ಕಂತು ಆರಂಭಿಸಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜಿಲ್ಲೆಯಲ್ಲಿ 164 ಅರ್ಜಿಗಳು ಸಲ್ಲಿಕೆಯಾಗಿವೆ. 83 ಅಭ್ಯರ್ಥಿಗಳಿಗೆ ತಲಾ 2 ಲಕ್ಷ ರೂ. ಸಾಲ ನೀಡಲಾಗಿದೆ. ಅಭ್ಯರ್ಥಿಗಳ ಬ್ಯಾಂಕ್ ವಿವರ, ಅಂಚೆ ಕಚೇರಿ ಖಾತೆಯ ಗರಿಷ್ಠ ವಹಿವಾಟು ಮಿತಿ 2 ಲಕ್ಷ ರೂ. ಇದ್ದುದರಿಂದ ಮತ್ತು ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮಾಡಿಸದಿರುವ ಕಾರಣಕ್ಕೆ ರಾಜ್ಯದಲ್ಲಿ 54 ಅಭ್ಯರ್ಥಿಗಳ ಅಕೌಂಟ್‌ಗೆ ಜಮಾವಣೆಯಾದ ಹಣ ವಾಪಸ್ ಮಂಡಳಿಗೆ ಬಂದಿದೆ ಎಂದರು.
ಸಾಂದೀಪಿನಿ ಶಿಷ್ಯ ವೇತನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುವ ಸಲುವಾಗಿ 2025-26ನೇ ಸಾಲಿನಲ್ಲಿ ರಾಜ್ಯದಲ್ಲಿ ಪ್ರತಿ ವಿದ್ಯಾರ್ಥಿಗೆ 15 ಸಾವಿರ ರೂ.ನಂತೆ ಒಟ್ಟು 5.50 ಕೋಟಿ ರೂ. ನೀಡಲಾಗಿದೆ. ಕೆಎಎಸ್, ಐಎಎಸ್ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳಲು ಚಾಣಕ್ಯ ತರಬೇತಿ ಯೋಜನೆಯಲ್ಲಿ ಒಂದು ಲಕ್ಷ ರೂ. ನೆರವು ನೀಡಲಾಗುತ್ತದೆ. ಆದರೆ ಈ ಯೋಜನೆ ಲಾಭ ಪಡೆಯಲು ಸಲ್ಲಿಕೆಯಾದ ಅರ್ಜಿಗಳ ಸಂಖ್ಯೆ ವಿರಳ ಎಂದು ಬೇಸರ ವ್ಯಕ್ತಪಡಿಸಿದರು.
ಜೂನ್ ಹಾಗೂ ಜುಲೈನಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯವಾಗಲಿದೆ. ಇಡಬ್ಲುೃಎಸ್ (ಆರ್ಥಿಕವಾಗಿ ಹಿಂದುಳಿದವರ ಪ್ರಮಾಣ ಪತ್ರ)ನ್ನು ಈಗಲೇ ಸಿದ್ಧಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಪ್ರತಿನಿಧಿ ರಘುರಾಮ್, ಪ್ರಮಖರಾದ ಎಂ.ಎನ್.ಸುಂದರರಾಜ್, ಸಂತೋಷ್‌ಕುಮಾರ್, ಸುಮಿತ್ರಮ್ಮ ಸುದ್ದಿಗೋಷ್ಠಿಯಲ್ಲಿದ್ದರು.
"
ಬ್ರಾಹ್ಮಣ ಸಮುದಾಯದ ಅಡುಗೆ ಮಾಡುವವರು, ಬಡಿಸುವವರು, ಸಹಾಯಕರು, ಅರ್ಚಕರು ಹೀಗೆ ವಿವಿಧ ಕೆಲಸಗಳಲ್ಲಿ ನಿರತರಾದವರನ್ನು ಸರ್ಕಾರ ಅಸಂಘಟಿತ ಕಾರ್ಮಿಕರು ಎಂದು ಪರಿಗಣಿಸಿದೆ. ಅವರೆಲ್ಲರಿಗೆ ಕಾರ್ಮಿಕ ಗುರುತಿನ ಪತ್ರ ನೀಡಲಾಗುವುದು. ಹವ್ಯಕ, ದೈವಜ್ಞ, ಗೌಡ ಸಾರಸ್ವತ ಹೀಗೆ ಎಲ್ಲ ಪ್ರಕಾರದ ಬ್ರಾಹ್ಮಣ ವರ್ಗದವರು ಇದಕ್ಕೆ ಅರ್ಹರಾಗಿರುತ್ತಾರೆ. ಇಲ್ಲಿಯವರೆಗೆ ಶಿವಮೊಗ್ಗದಲ್ಲಿ ಸುಮಾರು 230 ಮಂದಿ ಇದರ ಪ್ರಯೋಜನ ಪಡೆದಿದ್ದಾರೆ.
— ಪಿ.ಎಂ.ಮಾಲತೇಶ್ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿರ್ದೇಶಕ