ತೀರ್ಥಹಳ್ಳಿ: ಶರಾವತಿ ಪತ್ತಿನ ಸಹಕಾರ ಸಂಘ 2025-26ನೇ ಸಾಲಿನಲ್ಲಿ 34,69,992 ರೂ. ಲಾಭಾಂಶ ಗಳಿಸಿದ್ದು, ಷೇರುದಾರರರಿಗೆ ಶೇ. 10 ಡಿವಿಡೆಂಡ್ ನೀಡಲಾಗುವುದು. ಸಂಘವು ಆಡಿಟ್ ವರದಿಯಲ್ಲಿ ನಿರಂತರ ಎ ಗ್ರೇಡ್ ಗಳಿಸಿದೆ ಎಂದು ಸಂಸ್ಥೆ ಸ್ಥಾಪಕ ಅಧ್ಯಕ್ಷ ಬಸವಾನಿ ವಿಜಯದೇವ್ ಹೇಳಿದರು.
ಸಂಸ್ಥೆಯ ಷೇರು ಬಂಡವಾಳ 7.60 ಕೋಟಿ ಇದ್ದು, 5,692 ಷೇರುದಾರರನ್ನು ಹೊಂದಿದೆ. 2025-26ನೇ ಸಾಲಿನಲ್ಲಿ 193.42 ಕೋಟಿ ರೂ. ವ್ಯವಹಾರ ನಡೆಸಿದ್ದು, ಷೇರುದಾರ ಸದಸ್ಯರಿಗೆ 67.94 ಕೋಟಿ ರೂ. ಸಾಲ ವಿತರಿಸಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿವಿಧ ಬಾಬ್ತುಗಳಲ್ಲಿ 36.11 ಕೋಟಿ ರೂ. ಠೇವಣಿ ಇಡಲಾಗಿದೆ. ಈ ಸಾಲಿನಲ್ಲಿ ಶೇ. 78 ವಸೂಲಾತಿ ಮಾಡಲಾಗಿದೆ. ಸಂಸ್ಥೆಯ ಆಪತ್‌ಧನ ನಿಧಿಯಲ್ಲಿ 1.87 ಕೋಟಿ ರೂ., ಇತರ ನಿಧಿಗಳಲ್ಲಿ 7.80 ಕೋಟಿ ರೂ. ಇಡಲಾಗಿದೆ. ಪ್ರಸ್ತುತ ಸಂಸ್ಥೆ ಸ್ಥಿರಾಸ್ತಿ ಮಾರುಕಟ್ಟೆ ಮೌಲ್ಯ 146.90 ಕೋಟಿ ರೂ. ಆಗಿದೆ ಎಂದರು.
ಸಂಸ್ಥೆ ಅಧ್ಯಕ್ಷ ಎಚ್.ವಿ.ಅಜಿತ್, ಕಾರ್ಯದರ್ಶಿ ಬಿ.ಎಂ.ಸುನೀತಾ, ಸಮೃದ್ಧಿ ಸಂಸ್ಥೆ ಅಧ್ಯಕ್ಷೆ ರೇವತಿ ಅನಂತಮೂರ್ತಿ, ಸಹ್ಯಾದ್ರಿ ಅಡಿಕೆ ಮಾರಾಟ ಸಹಕಾರ ಸಂಘದ ಕಾರ್ಯದರ್ಶಿ ಚಂದ್ರಕಲಾ ಸುದ್ದಿಗೋಷ್ಠಿಯಲ್ಲಿದ್ದರು.