ಜೇನು ಸಾಕಣೆಗೆ ಇರಿಸಿರುವ ಪೆಟ್ಟಿಗೆಗಳು. 
ಶಿವಮೊಗ್ಗ

ಜೇನು ಸಾಕಣೆಯಲ್ಲಿ ಯಶಸ್ವಿಯಾಗಿರುವ ಇಂಜಿನಿಯರ್ ದಂಪತಿ

ಪ್ರಮುಖ ಮುಖ್ಯಾಂಶಗಳು

  • ಯಶಸ್ವಿ ಜತೆಗೆ ಲಕ್ಷಾಂತರ ರೂ. ಆದಾಯ ಗಳಿಕೆ
  • ಜೇನುಕೃಷಿಯಲ್ಲಿ ವೈಜ್ಞಾನಿಕ ಅಂಶಗಳ ಪಾಲನೆ
ತೀರ್ಥಹಳ್ಳಿ: ವಾರಾಹಿ ಮುಳುಗಡೆ ಸಂತ್ರಸ್ತ ಕುಟುಂಬ ಆಗಿರುವ ಬಾಪೂ ಸಾಹೇಬ್ ಮತ್ತು ಸೀಮಾ ದಂಪತಿ ವೃತ್ತಿ ಬೇರೆಯಾದರೂ ಪ್ರವೃತ್ತಿ ಜೇನು ಸಾಕಣೆಯಲ್ಲಿ ಯಶಸ್ವಿಯಾಗಿದ್ದಾರೆ.
ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಬಾಪೂ ಸಾಹೇಬ್ ಹೊಸಂಗಡಿಯ ಕೆಪಿಸಿ ವಿದ್ಯುತ್ ಕಾರ್ಯಾಗಾರದಲ್ಲಿ ಪ್ರಸ್ತುತ ಸೈಟ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೇನು ಕೃಷಿ ಬಗ್ಗೆ ಆಸಕ್ತಿ ಹೊಂದಿದ್ದ ಇವರ ಪತ್ನಿ ಸೀಮಾ ಅದರಲ್ಲಿ ತಾಂತ್ರಿಕ ತರಬೇತಿ ಪಡೆದು ಆರು ವರ್ಷಗಳಿಂದ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಆರ್ಥಿಕ ಆದಾಯದೊಂದಿಗೆ ಯಶಸ್ಸು ಗಳಿಸಿದ್ದಾರೆ.
ತಮ್ಮ ಕುಟುಂಬಕ್ಕಿದ್ದ ಭೂಮಿ ಮುಳುಗಡೆಯಾದ ನಂತರ ಹೊಸನಗರ ತಾಲೂಕಿನ ಯಡೂರು ಸಮೀಪದ ವಾರಾಹಿ ಹಿನ್ನೀರಿನ ಪರಿಸರದಲ್ಲಿ ಎರಡು ಎಕರೆಯಷ್ಟು ಜಮೀನು ಹೊಂದಿದ್ದು, ಅಡಕೆ ಬೆಳೆದಿದ್ದಾರೆ. ಮನೆ ಆವರಣ ಮತ್ತು ಸಮೀಪದ ಹಾಡ್ಯದ ನಡುವೆ 40 ಜೇನು ಪೆಟ್ಟಿಗೆ ಇರಿಸಿ ಅತ್ಯಂತ ವೈಜ್ಞಾನಿಕವಾಗಿ ನಿರ್ವಹಣೆ ಮಾಡುತ್ತಾರೆ. ಜೇನು ಸಾಕಣೆಗೆ ಪೂರಕವಾದ ಎಲ್ಲ ಉಪಕರಣಗಳು ಮಾತ್ರವಲ್ಲದೆ ಫುಡ್ ಸೇಫ್ಟಿ ಸೇರಿದಂತೆ ಕಾನೂನು ಬದ್ಧವಾದ ಎಲ್ಲ ಅಗತ್ಯ ಪರವಾನಗಿ ಹೊಂದಿದ್ದಾರೆ.
ವಾರ್ಷಿಕ 150 ರಿಂದ 200 ಕೆಜಿ ಜೇನು ತುಪ್ಪ ಸಿದ್ಧವಾಗುತ್ತಿದ್ದು, ತಮ್ಮದೇ ಆದ ಬ್ರಾಂಡ್‌ನೊಂದಿಗೆ ಪ್ರತಿ ಕೆಜಿಗೆ 800 ರೂ.ನಿಂದ 1000 ರೂ.ವರೆಗೆ ದರ ನಿಗದಿಪಡಿಸಿದ್ದಾರೆ. ಹಾಲಿಗೆ ಗ್ರಾಮದ ಮಾರ್ಗದಲ್ಲಿ ಸಂಚರಿಸುವ ಪ್ರವಾಸಿಗರಲ್ಲದೇ ಆನ್‌ಲೈನ್ ಮೂಲಕವೂ ಗ್ರಾಹಕರಿದ್ದಾರೆ. ಉತ್ತಮ ಗುಣಮಟ್ಟ ಕಾಯ್ದುಕೊಂಡಿದ್ದೇವೆ. ಹೀಗಾಗಿ ನಮಗೆ ಮಾರುಕಟ್ಟೆ ಸಮಸ್ಯೆ ಇಲ್ಲ. ಅಗತ್ಯಕ್ಕಿಂತ ಹೆಚ್ಚು ಬೇಡಿಕೆ ಇದೆ ಎನ್ನುತ್ತಾರೆ.
ಇವರು ಪ್ರಸ್ತುತ ಹೊಸಂಗಡಿಯಲ್ಲಿ ನೆಲೆಸಿದ್ದು, ವಾರಕ್ಕೊಮ್ಮೆ ಹಾಲಿಗೆಗೆ ಆಗಮಿಸಿ ನಿರ್ವಹಣೆ ನೋಡಿಕೊಳ್ಳುತ್ತಿದ್ದಾರೆ. ಕೇವಲ ಹವ್ಯಾಸಕ್ಕಾಗಿ ಆರಂಭಿಸಿದ ಜೇನುಹುಳು ಸಾಕಣೆ ಇದೀಗ ಲಾಭದಾಯಕವಾಗಿ ಪರಿಣಮಿಸಿದೆ. ಜೇನು ಹುಳುವಿನ ಜೀವನ ಶೈಲಿ, ಅವುಗಳ ಕಾರ್ಯನಿರ್ವಹಣೆ ಬಗ್ಗೆ ಅಧ್ಯಯನ ನಡೆಸಿದ್ದಾರೆ.
ಎರಡು ಎಕರೆ ಜಮೀನಿನಲ್ಲಿ ಅಡಕೆ ಬೆಳೆಯನ್ನು ಹೊಂದಿದ್ದು, ಅಡಕೆ ಬೆಳೆಗೆ ಕೊಳೆರೋಗ ಬಂದಿದ್ದರೂ ಜೇನು ಹುಳುಗಳಿಗೆ ಹಾನಿಯಾಗಬಾರದು ಎಂಬ ಕಾರಣಕ್ಕೆ ಹಾನಿಕಾರಕ ಔಷಧ ಸಿಂಪಡಣೆ ಮಾಡದೆ ಹಾಗೆ ಬಿಟ್ಟಿದ್ದಾರೆ. ನಮ್ಮ ಮನೆಯ ಸುತ್ತಲೂ ದಟ್ಟ ಅರಣ್ಯ ಇರುವ ಕಾರಣ ಎಲ್ಲ ರೀತಿ ಹೂಗಳು ಲಭ್ಯವಿದೆ. ಇದರಿಂದ ಗುಣಮಟ್ಟದ ಜೇನಿನೊಂದಿಗೆ ಉತ್ತಮ ಇಳುವರಿಯೂ ದೊರೆಯುತ್ತಿದೆ ಎನ್ನುತ್ತಾರೆ ದಂಪತಿ.
ಜೇನು ಕೃಷಿಯಿಂದ ದೊರೆತ ಬೆಂಬಲದಿಂದ ಉತ್ತೇಜಿತರಾಗಿರುವ ಈ ಕುಟುಂಬ ಮಲೆನಾಡಿನ ಪರಿಸರದಲ್ಲಿ ದೊರೆಯುವ ವಾಟೇಹುಳಿ, ಪುನರ್ಪುಳಿ ಮುಂತಾದ ಉತ್ಪನ್ನಗಳನ್ನು ಬಳಸಿ ಸೀಮಿತ ವ್ಯಾಪ್ತಿಯಲ್ಲಿ ವ್ಯವಹಾರಿಕ ಚಟುವಟಿಕೆ ವಿಸ್ತರಿಸುವ ಉದ್ದೇಶವನ್ನೂ ಹೊಂದಿದೆ.
ನಮಗಿರುವ ಇಬ್ಬರು ಮಕ್ಕಳು ಇಂಜಿನಿಯರ್ ಆಗಿದ್ದಾರೆ. ಮನೆಯಲ್ಲಿ ವ್ಯರ್ಥವಾಗಿ ಸಮಯ ಕಳೆಯುವುದಕ್ಕಿಂತ ಕ್ರಿಯಾಶೀಲ ಆಗಿರಬೇಕೆಂಬ ಕಾರಣಕ್ಕೆ ಮಾಡುತ್ತಿದ್ದೇನೆ. ಇದರಿಂದ ಮನಸ್ಸಿಗೂ ನೆಮ್ಮದಿ ದೊರೆತಿದೆ. ಗುಣಮಟ್ಟದ ಜೇನಿಗೆ ಸಾಕಷ್ಟು ಬೇಡಿಕೆ ಇದೆ. ಉತ್ತಮ ಧಾರಣೆ ದೊರೆಯುತ್ತದೆ. ರೈತ ಮಹಿಳೆಯರು ಹೆಚ್ಚು ಶ್ರಮವಿಲ್ಲದೆ ಜೇನುಕೃಷಿ ಮಾಡಬಹುದು.
 ಸೀಮಾ ಬಾಪೂ ಸಾಹೇಬ್