ಜಿಲ್ಲೆ

ಕೌಶಲ ಗುರ್ತಿಸಲು ಕ್ರೀಡಾ ಮೇಳ ಸಹಕಾರಿ

ನ್ಯಾಮತಿ: ವಿದ್ಯಾರ್ಥಿಗಳಲ್ಲಿ ಅಡಗಿರುವ ಕ್ರೀಡಾ ಕೌಶಲ ಗುರುತಿಸಲು ಕ್ರೀಡಾಮೇಳ ಆಯೋಜಿಸಲಾಗಿದೆ ಎಂದು ಶಿವಮೊಗ್ಗ ವಲಯದ ಪ್ರಾದೇಶಿಕ ಅಧಿಕಾರಿ ವಸಂತ ಎನ್. ಬಡಿಗೇರ್ ಹೇಳಿದರು.

ತಾಲೂಕಿನ ದಾನಿಹಳ್ಳಿ ಗ್ರಾಮದ ಹೊರವಲಯದ ತರಳಬಾಳು ಜಗದ್ಗುರು ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಿವಮೊಗ್ಗ ವಲಯ ವಿಭಾಗದ ಪ್ರೌಢಶಾಲಾ ಕ್ರೀಡಾ ಮೇಳದಲ್ಲಿ ಮಾತನಾಡಿ ಕ್ರೀಡೆಗಳಿಂದ ಮನೋಲ್ಲಾಸ ಸಿಗಲಿದೆ ಎಂದರು.

ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಡಿ. ತೀರ್ಥಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಸಾಧುವೀರಶೈವ ಸಮುದಾಯದ ತಾಲೂಕು ಅಧ್ಯಕ್ಷ ಜಿ. ಶಿವಪ್ಪ ಧ್ವಜಾರೋಹಣ ನೆರವೇರಿಸಿದರು.

ಆಗರದಹಳ್ಳಿ, ಬಳ್ಳಿಗಾವಿ, ಬೆನಕನಹಳ್ಳಿ, ಚನ್ನಗಿರಿ, ನಲ್ಲೂರು ಮಾರವಳ್ಳಿ, ಭದ್ರಾವತಿ, ಹೊದಿಗೆರೆ, ಹನಸವಾಡಿ, ಗೋಪೇನಹಳ್ಳಿ ಹಾಗೂ ದಾನಿಹಳ್ಳಿ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ.

ಸಮಿತಿ ಉಪಾಧ್ಯಕ್ಷ ಪಿ.ಜಿ. ಈಶ್ವರಪ್ಪ ಗೌಡ, ಕಾರ್ಯದರ್ಶಿ ಮಲ್ಲೇಶಪ್ಪ ಗಂಜೀನಹಳ್ಳಿ, ತಾಲೂಕು ದೈಹಿಕ ಶಿಕ್ಷಣ ಅಧಿಕಾರಿ ಜಗದೀಶ, ಸದಸ್ಯ ಕೆ.ಸಿ. ಬಸವರಾಜಪ್ಪ, ಮಲ್ಲೇಶಪ್ಪ, ಉಜ್ಜಿನಪ್ಪ, ಡಿ. ಜಯಪ್ಪ, ನಾಗರಾಜಪ್ಪ, ಪರಮೇಶ್ವರಪ್ಪ, ಮುಖ್ಯಶಿಕ್ಷಕಿ ಸಿ.ಆರ್. ಶ್ವೇತಾ, ಪ್ರಾಚಾರ್ಯ ಶಶಿಧರ್ ಇದ್ದರು.

ಸ್ಪರ್ಧೆಗಳ ವಿಜೇತರು: ಬಾಲಕಿಯರ ವಿಭಾಗದಲ್ಲಿ ದಾನಿಹಳ್ಳಿ ಶಾಲೆಯ ಪುಷ್ಪಾ 100 ಮೀ. ಎಚ್.ಎಂ. ಸ್ಪೂರ್ತಿ 400 ಮೀ. ಯಶೋದಾ 1500 ಮೀ. ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಗುಂಡು ಎಸೆತದಲ್ಲಿ ಗೋಪೇನಹಳ್ಳಿ ಶಾಲೆಯ ಪೂರ್ವಿಕಾ ಪ್ರಥಮ ಸ್ಥಾನ ಗಳಿಸಿದ್ದಾರೆ.

4*100 ಮೀ. ರಿಲೇ, ವಾಲಿಬಾಲ್-ಖೋಖೋದಲ್ಲಿ ದಾನಿಹಳ್ಳಿ ಶಾಲೆ ಪ್ರಥಮ ಸ್ಥಾನ ಗಳಿಸಿತು. ಕಬಡ್ಡಿಯಲ್ಲಿ ಪ್ರಥಮ ಸ್ಥಾನದೊಂದಿಗೆ ಬೆನಕನಹಳ್ಳಿ ಶಾಲೆ ಮುಂದಿನ ಹಂತಕ್ಕೆ ಆಯ್ಕೆಯಾಯಿತು.

ಬಾಲಕರ ವಿಭಾಗ: 100 ಮೀ. ಓಟದ ಸ್ಪರ್ಧೆಯಲ್ಲಿ ಹರಮಘಟ್ಟ ಅರ್ಜುನ, 1500 ಮೀ. ಓಟದಲ್ಲಿ ಹೊದಿಗೆರೆ ಮಂಜುನಾಥ್ ಪ್ರಥಮ ಬಹುಮಾನ ಪಡೆದರು. 400 ಮೀ. ಓಟದಲ್ಲಿ ಆಗರದಹಳ್ಳಿ ಶಾಲೆ, ವಾಲಿಬಾಲ್ ಮತ್ತು ಖೋಖೋ ಪಂದ್ಯಗಳಲ್ಲಿ ನಲ್ಲೂರು ಶಾಲೆ, ಕಬಡ್ಡಿ ಕ್ರೀಡೆಯಲ್ಲಿ ಹನಸವಾಡಿ ಶಾಲೆ ಪ್ರಥಮ ಸ್ಥಾನ ಪಡೆದಿದೆ.

ಶಿವಮೊಗ್ಗ ವಲಯ ವಿಭಾಗದ ಪ್ರೌಢಶಾಲಾ ಕ್ರೀಡಾ ಮೇಳ