ಜಿಲ್ಲೆ

ಶಿವಮೊಗ್ಗ ವ್ಯಕ್ತಿಯಲ್ಲಿ ದಕ್ಷಿಣ ಆಫ್ರಿಕಾದ ರೂಪಾಂತರಿ ಸೋಂಕು

ಶಿವಮೊಗ್ಗ: ಇಲ್ಲಿನ ಜೆಪಿ ನಗರದ ವ್ಯಕ್ತಿಗೆ  ದಕ್ಷಿಣಾ ಆಫ್ರಿಕಾದ ರೂಪಾಂತರಿ ಕರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಆದರೆ ಆತನ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರಲ್ಲಿ ಸೋಂಕು ಇಲ್ಲದಿರುವುದು ಕೊಂಚ ನಿಟ್ಟುಸಿರು ಬಿಡುವಂತೆ ಮಾಡಿದೆ.
ದುಬೈನಿಂದ ಬಂದಿದ್ದ 53 ವರ್ಷದ ವ್ಯಕ್ತಿ ಜೆಪಿ ನಗರದಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದು ಫೆ.29ರಂದು ದುಬೈನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ಅವರು ಅಲ್ಲಿಯೇ ಸ್ವಾಬ್ ಟೆಸ್ಟ್ ಮಾಡಿಸಿದ್ದರು. ಅಲ್ಲಿಂದ ಶಿವಮೊಗ್ಗದ ಜೆಪಿ ನಗರದ ಮನೆಗೆ ಬಂದು ಹೋಮ್ ಕ್ವಾರಂಟೈನ್‌ನಲ್ಲಿದ್ದರು. ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸ ಕಂಡುಬಾರದೇ ಸಹಜವಾಗಿಯೇ ಇದ್ದರು.
ಏರ್‌ಪೋರ್ಟ್‌ನಲ್ಲಿ ಮಾಡಿದ್ದ ಕರೋನಾ ಟೆಸ್ಟ್‌ನಲ್ಲಿ  ದಕ್ಷಿಣಾ ಆಫ್ರಿಕಾ ರೂಪಾಂತರಿ ವೈರಸ್ ಸೋಂಕು ತಗುಲಿರುವುದು ಗೊತ್ತಾಗಿದ್ದು,  ವಿಮಾನ ನಿಲ್ದಾಣದ ಅಧಿಕಾರಿಗಳು ಶಿವಮೊಗ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ವಿಷಯ ರವಾನಿಸಿದ್ದಾರೆ. ತಕ್ಷಣವೇ ಆರೋಗ್ಯ ಇಲಾಖೆ ಅಧಿಕಾರಿಗಳು ಸೋಂಕಿತನನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆತಂದಿದ್ದಾರೆ.
ವ್ಯಕ್ತಿಯ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ಪತ್ನಿ ಮತ್ತು ಪುತ್ರ ಸೇರಿ 9 ಮಂದಿ ಗಂಟಲು ದ್ರವ ಪರೀಕ್ಷಿಸಲಾಗಿದೆ. ಪತ್ನಿ ಮತ್ತು ಪುತ್ರನ ವರದಿ ನೆಗೆಟಿವ್ ಬಂದಿದೆ. ಉಳಿದ 7 ಜನರ ವರದಿಯನ್ನು ಇಲಾಖೆ ಎದುರು ನೋಡುತ್ತಿದ್ದು ಎಲ್ಲರನ್ನೂ ಕ್ವಾರಂಟೈನ್‌ಗೆ ಸೂಚಿಸಲಾಗಿದೆ. ಉಳಿದಂತೆ ದ್ವಿತೀಯ ಸಂಪರ್ಕಕ್ಕೆ ಬಂದಿದ್ದ 30 ಜನರ ಮಾಹಿತಿಯನ್ನು ಆರೋಗ್ಯ ಇಲಾಖೆ ಪಡೆದುಕೊಂಡಿದ್ದು ತಪಾಸಣೆಗೊಳಪಡಿಸುವ ಸಾಧ್ಯತೆ ಇದೆ.