ದೇವದುರ್ಗ ತಾಲೂಕಿನ ಗಬ್ಬೂರಿನಲ್ಲಿ ಶರಣರ ಬಿಬ್ಬಿ ಬಾಚರಸರ ಕರ್ತೃ ಗದ್ದಿಗೆ ಮತ್ತು ಶಿಲಾಮೂರ್ತಿ ಉದ್ಘಾಟನೆ ಕಾರ್ಯಕ್ರಮವನ್ನು ಬಸವ ನವಲಿಂಗ ಶರಣರು ಉದ್ಘಾಟಿಸಿದರು. ಸುಲ್ತಾನಪುರದ ಶ್ರೀ ಶಂಭುಸೋಮನಾಥ ಶಿವಾಚಾರ್ಯ ಸ್ವಾಮೀಜಿ, ಪ್ರಾಧ್ಯಾಪಕ ಡಾ.ಶಿವಯ್ಯ ಹಿರೇಮಠ, ಅರಿವಿನಮನೆಯ ಮುಖ್ಯಸ್ಥ ಗುರುಬಸವ ದೇವರು ಇದ್ದರು. 
ಜಿಲ್ಲೆ

ಹಸಿದವರಿಗೆ ಪ್ರಸಾದ ನೀಡಿದ ಬಿಬ್ಬಿ ಬಾಚರಸ, ಶ್ರೀಬಸವ ನವಲಿಂಗ ಶರಣರ ಅಭಿಮತ

ದೇವದುರ್ಗ: 12ನೇ ಶತಮಾನದ ಬಸವಣ್ಣನವರ ಸಮಕಾಲಿನ ಶರಣ ಬಿಬ್ಬಿ ಬಾಚರಸರು ದಾಸೋಹ, ಕಾಯಕ ಮಾಡುತ್ತಾ ಹಸಿದವರಿಗೆ ಪ್ರಸಾದ ನೀಡಿದ ಮಹಾನ್ ಶರಣರು ಎಂದು ಶಿವಮೊಗ್ಗದ ಪ್ರಭುದೇವರ ಜ್ಞಾನ ಕೇಂದ್ರದ ಶ್ರೀ ಬಸವ ನವಲಿಂಗ ಶರಣರು ಹೇಳಿದರು.

ತಾಲೂಕಿನ ಗಬ್ಬೂರಿನಲ್ಲಿ ಮಹಾದಾಸೋಹಿ ಶರಣರ ಬಿಬ್ಬಿ ಬಾಚರಸರ ನೂತನ ಕರ್ತೃ ಗದ್ದುಗೆ ಮತ್ತು ಶಿಲಾಮೂರ್ತಿ ಉದ್ಘಾಟನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಭಾನುವಾರ ಮಾತನಾಡಿದರು.

ಶರಣರು ನುಡಿದಂತೆ ನಡೆದಿದ್ದಾರೆ. 770 ಅಮರಗಣಂಗಳಲ್ಲಿ ಗಬ್ಬೂರಿನ ಬಿಬ್ಬಿ ಬಾಚರಸರು ಒಬ್ಬರು. ಕಲ್ಯಾಣದಲ್ಲಿ ಎಲ್ಲೇ ಪ್ರಸಾದ ಉಳಿದರೆ ಅದನ್ನು ತಂದು ಇನ್ನೊಬ್ಬರ ಹೊಟ್ಟೆ ತುಂಬಿಸುತ್ತಿದ್ದರು. ಅವರ ವಚನಗಳು ಇಂದಿನ ಸಮಾಜಕ್ಕೆ ಪ್ರಸ್ತುತವಾಗಿವೆ. ಇಂದಿಗೂ ಬಸವಣ್ಣನವರ ಹೆಸರು ಅಜರಾಮರಾಗಿದೆ. ಶರಣರು ಈ ನಾಡಿಗೆ ಹೊಸ ವಿಚಾರಗಳನ್ನು ನೀಡಿದ್ದಾರೆ. ಅವರ ವಚನ ಸಾಹಿತ್ಯ ಎಂದೆಂದಿಗೂ ಪ್ರಸ್ತುತವಾಗಿರುತ್ತದೆ. ಬಿಬ್ಬಿ ಬಾಚರಸರ 108ವಚನಗಳು ಲಭ್ಯವಾಗಿವೆ ಎಂದು ತಿಳಿಸಿದರು.

ಪ್ರಾಧ್ಯಾಪಕ ಡಾ.ಶಿವಯ್ಯ ಹಿರೇಮಠ ಮಾತನಾಡಿ, ಗಬ್ಬೂರು ಐತಿಹಾಸಿಕ ಸ್ಥಳವಾಗಿದೆ. ಬಿಬ್ಬಿ ಬಾಚರಸರು ಪ್ರಭಾವಿ ಶರಣರಾಗಿದ್ದು 900ವರ್ಷ ಕಳೆದರೂ ಈ ಸ್ಥಳಕ್ಕೆ ಮಹತ್ವ ಕುಂದಿಲ್ಲ. ದಾಸೋಹ ಕಾಯಕ ಮಹತ್ವ ತಿಳಿಸಿಕೊಟ್ಟ ಶರಣ ಬಿಬ್ಬಿ ಬಾಚರಸರು, ಕಲ್ಯಾಣದ ಕ್ರಾಂತಿ ನಂತರ ಅನೇಕ ಶರಣರನ್ನು ತಮ್ಮ ಜತೆ ಕರೆದುಕೊಂಡುಬಂದಿದ್ದಾರೆ. ಇಂತಹ ಮಹಾನ್ ಶರಣ ಜಿಲ್ಲೆಯಲ್ಲಿ ನೆಲಸಿದ್ದು ಹೆಮ್ಮೆಯ ವಿಷಯ ಎಂದರು.

ಸುಲ್ತಾನಪುರ ಪಂಚಾಕ್ಷರಿ ಮಹಾಸಂಸ್ಥಾನ ಮಠದ ಶ್ರೀಶಂಭುಸೋಮನಾಥ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದೇವದುರ್ಗದ ಅರಿವಿನಮನೆಯ ಮುಖ್ಯಸ್ಥ ಗುರುಬಸವ ದೇವರು, ಬಸವ ಕೇಂದ್ರದ ಜಿಲ್ಲಾಧ್ಯಕ್ಷ ಕುರಿಕುಂದಿ ವೀರಭದ್ರಪ್ಪ, ಶರಣ ತಿಮ್ಮನಗೌಡ ಚಿಲ್ಕರಾಗಿ, ಪ್ರಭಯ್ಯಸ್ವಾಮಿ, ವೀರಭದ್ರ ಸ್ವಾಮೀಜಿ, ರಾಚನಗೌಡ, ಸದಾಶಿವಯ್ಯ ಗಬ್ಬೂರು, ವೈದ್ಯರಾದ ಬಸವಪ್ರಭುಪಾಟೀಲ್ ಇದ್ದರು.