ಜಿಲ್ಲೆ

ಪಾಲೀಶ್ ನೆಪದಲ್ಲಿ ಕಣ್ಣೆದುರೇ ಮಾಂಗಲ್ಯ ಸರ ವಂಚನೆ: ಠಾಣೆ ಮೆಟ್ಟಿಲೇರಿದ ಗೃಹಿಣಿ

Shivamogga

ಶಿವಮೊಗ್ಗ: ನಗರದಲ್ಲಿ ಸರಗಳ್ಳರ ಭೀತಿ ನಡುವೆ ಇದೀಗ ಚಿನ್ನಾಭರಣಕ್ಕೆ ಹೊಳಪು ನೀಡುವುದಾಗಿ ವಂಚಿಸುವ ಬ್ರೌನ್ ಪೌಡರ್ ಗ್ಯಾಂಗ್‌ವೊಂದು ಪ್ರತ್ಯಕ್ಷವಾಗಿದ್ದು ದೊಡ್ಡಪೇಟೆ ಠಾಣಾ ವ್ಯಾಪ್ತಿಯಲ್ಲಿ ಗೃಹಿಣಿಯೊಬ್ಬರು ಅರ್ಧ ಮಾಂಗಲ್ಯ ಸರವನ್ನೇ ಕಳೆದುಕೊಂಡಿದ್ದಾರೆ.
ಅಶೋಕ ನಗರದ ಸಂಗೀತಾ ವಂಚನೆಗೆ ಒಳಗಾದವರು. ಚಿನ್ನಾಭರಣವನ್ನು ಫಳಫಳ ಹೊಳೆಯುವಂತೆ ಮಾಡಿ ಕೊಡುತ್ತೇವೆಂದು ನಂಬಿಸಿ 46 ಗ್ರಾಂ ಮಾಂಗಲ್ಯಸರ ಪಡೆದು ಸ್ವಲ್ಪವೂ ಅನುಮಾನ ಬಾರದಂತೆ ಆಕೆಯ ಕಣ್ಣೆದುರೇ ವಂಚಿಸಿ ಕೈಚಳಕ ತೋರಲಾಗಿದೆ.
ಮನೆಯ ಶೋಕೇಸ್, ಟಿವಿ, ಬೆಳ್ಳಿ, ಬಂಗಾರದ ಆಭರಣ ಸೇರಿ ಹಲವು ವಸ್ತುಗಳನ್ನು ಸ್ವಚ್ಛಗೊಳಿಸಿ ಹೊಳಪು ನೀಡುವ ಪೌಡರ್ ಮಾರಾಟ ಮಾಡುತ್ತಿದ್ದೇವೆಂದು ನಂಬಿಸಿದ ಯುವಕನೊಬ್ಬ ಸಂಗೀತಾ ಅವರ ಮನೆ ಬಳಿಗೆ ಬಂದು ಮಾದರಿ ತೋರಿಸುವುದಾಗಿ ತಿಳಿಸಿದ್ದರು.
ಇದನ್ನು ನಂಬಿದ ಸಂಗೀತಾ ತಮ್ಮ ಬಳಿಯಿದ್ದ ಕಾಲುಂಗುರವನ್ನು ತೆಗೆದುಕೊಟ್ಟಿದ್ದಳು. ಅದನ್ನು ಬ್ರೌನ್ ಪೌಡರ್ ಬಳಸಿ ಫಳಫಳ ಹೊಳೆಯುವಂತೆ ಮಾಡಿಕೊಟ್ಟಿದ್ದ. ಆ ಬಳಿಕ ಚಿನ್ನದ ಆಭರಣಗಳಿದ್ದರೆ ಅವುಗಳನ್ನು ಹೊಳೆಯುವಂತೆ ಮಾಡಿಕೊಡುತ್ತೇವೆಂದು ವಂಚಕ ನಂಬಿಸಿದ್ದ. ಈ ವೇಳೆ ಸಂಗೀತಾ ತಮ್ಮ ಮಾಂಗಲ್ಯ ಸರವನ್ನೇ ಕಳಚಿ ವಂಚಕರ ಕೈಗಿಟ್ಟಿದ್ದು ಮಾಂಗಲ್ಯ ಸರದ ಮೇಲೆ ಬ್ರೌನ್ ಪೌಡರ್ ಸುರಿದು, ಲಿಕ್ವಿಡ್ ಮತ್ತು ಜೆಲ್ ಹಾಕಿ ಬ್ರೆಷ್ ಬಳಸಿ ವಂಚಕರು ತೊಳೆಯುವಂತೆ ನಟಿಸಿದ್ದಾನೆ.
ಬಳಿಕ ಬಟ್ಟೆಗೆ ಸೀಮೆಎಣ್ಣೆ ಹಾಕಿ ಬೆಂಕಿ ಹಚ್ಚಿ ಚಿನ್ನದ ಸರವನ್ನು ಬಿಸಿ ಮಾಡಿದ್ದಾರೆ. ನಂತರ ಮಾಂಗಲ್ಯ ಸರವನ್ನು ನೀರಿನಿಂದ ತೊಳೆದು ಅರಿಶಿನ ಪುಡಿ ಹಾಕಿ, ಪೇಪರ್ ಒಂದರಲ್ಲಿ ಪೊಟ್ಟಣ ಕಟ್ಟಿ ಕೊಟ್ಟಿದ್ದಾರೆ. ಹತ್ತು ನಿಮಿಷದ ಬಳಿಕ ಪೊಟ್ಟಣ ತೆಗೆಯುವಂತೆ ಸಂಗೀತಾ ಅವರಿಗೆ ತಿಳಿಸಿದ ವಂಚಕ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಬಳಿಕ ಪೊಟ್ಟಣ ತೆರೆದು ನೋಡಿದಾಗ ಮಾಂಗ್ಯಲ ಸರ ತುಂಡು ತುಂಡಾಗಿದ್ದು, 93 ಸಾವಿರ ರೂ. ಮೌಲ್ಯದ 23 ಗ್ರಾಂ ಮಾಂಗಲ್ಯ ಸರ ಕದ್ದು ಪರಾರಿಯಾಗಿದ್ದಾನೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.