ಜಿಲ್ಲೆ

ಗೃಹ ಸಚಿವರ ವಿರುದ್ಧ ಕಿಮ್ಮನೆ ಚಾರ್ಜ್‌ಶೀಟ್

Shivamogga

ಶಿವಮೊಗ್ಗ: ತೀರ್ಥಹಳ್ಳಿ ಕ್ಷೇತ್ರದಲ್ಲಿ ಹಾಲಿ-ಮಾಜಿ ಸಚಿವರ ನಡುವೆ ಮತ್ತೊಂದು ಸುತ್ತಿನ ರಾಜಕೀಯ ಸಮರ ಆರಂಭವಾಗುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ. ಹಲವು ಅಕ್ರಮಗಳ ಪಾಲುದಾರರಾಗಿರುವ ಸಚಿವ ಆರಗ ಜ್ಞಾನೇಂದ್ರ ರಾಜೀನಾಮೆ ನೀಡಿ ತನಿಖೆ ಎದುರಿಸಿದೇ ಇದ್ದರೆ ಅವರ ಅಕ್ರಮಗಳ ಪಟ್ಟಿಯನ್ನು ಫೆಬ್ರವರಿ ಎರಡನೇ ವಾರದಲ್ಲಿ ಬಿಡುಗಡೆ ಮಾಡುವುದಾಗಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಗುಡುಗಿದ್ದಾರೆ.

ಕುಕ್ಕರ್ ಬಾಂಬ್ ಬ್ಲಾಸ್ಟ್ ಆರೋಪಿ ಶಾರಿಖ್ ಹಣಕಾಸು ವಹಿವಾಟಿನ ತನಿಖೆಯ ಬೆನ್ನತ್ತಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತೀರ್ಥಹಳ್ಳಿ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ ಮರುದಿನವೇ ತಮ್ಮ ರಾಜಕೀಯ ಎದುರಾಳಿ ಆರಗ ಜ್ಞಾನೇಂದ್ರ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಕಿಮ್ಮನೆ ಮಾಡಿದ್ದಾರೆ.

ಪಿಎಸ್‌ಐ ನೇಮಕಾತಿ ಹಗರಣ, ಈಗ ಎಲ್ಲರ ಗಮನ ಸೆಳೆದಿರುವ ಸ್ಯಾಂಟ್ರೋ ರವಿ ಜತೆಗಿನ ಗೃಹ ಸಚಿವರ ನಂಟ, ಇವರೆಡರಲ್ಲೂ ಆರಗ ಜ್ಞಾನೇಂದ್ರ ಎ-1 ಆರೋಪಿ. ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲವೇ ಅವರನ್ನು ಸಿಎಂ ಬಸವರಾಜ ಬೊಮ್ಮಾಯಿ ಸಚಿವ ಸಂಪುಟದಿಂದ ಕೈಬಿಟ್ಟು ತನಿಖೆಗೆ ಸೂಚಿಸಬೇಕೆಂದು ಆಗ್ರಹಿಸಿದರು.

ಫೆಬ್ರವರಿ ಎರಡನೇ ವಾರದೊಳಗೆ ನನ್ನ ಬೇಡಿಕೆ ಈಡೇರದೇ ಇದ್ದರೆ ತೀರ್ಥಹಳ್ಳಿಯಲ್ಲಿ ದೊಡ್ಡ ಸಮಾವೇಶ ನಡೆಸಿ ಆರಗ ಜ್ಞಾನೇಂದ್ರ ಅವರ ಅಕ್ರಮಗಳ ಪಟ್ಟಿ ಹಾಗೂ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ. ಅವರ ವಿರುದ್ಧದ ಹೋರಾಟದ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಹೇಳಿದರು.