ಜಿಲ್ಲೆ

ಫ್ಲೆಕ್ಸ್ ವಿವಾದದ ಹಿಂದೆ ಮತೀಯ ಸಂಘಟನೆಗಳ ಕೈವಾಡ: ಬಿ.ವೈ.ವಿಜಯೇಂದ್ರ

ಶಿವಮೊಗ್ಗ: ಶಿವಮೊಗ್ಗದಲ್ಲಿ ಫ್ಲೆಕ್ಸ್ ವಿವಾದದ ಹಿಂದೆ ಮತೀಯ ಸಂಘಟನೆಗಳ ಕೈವಾಡವಿರುವುದು ಗುಟ್ಟಾಗಿ ಉಳಿದಿಲ್ಲ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಳವಳ ವ್ಯಕ್ತಪಡಿಸಿದರು.

ಗಾಂಧಿಬಜಾರ್‌ನಲ್ಲಿ ಚಾಕು ಇರಿತಕ್ಕೆ ಒಳಗಾಗಿ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಪ್ರೇಮ್‌ಸಿಂಗ್ ಆರೋಗ್ಯ ವಿಚಾರಿಸಿದ ಬಳಿಕ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಮೊನ್ನೆವರೆಗೆ ಕ್ರಿಕೆಟ್ ಆಡುತ್ತಿದ್ದ ಹುಡುಗರೂ ಚಾಕು ಚೂರಿ ಹಿಡಿದು ಓಡಾಡುತ್ತಿರುವುದು ಅತಂಕಕಾರಿ ವಿಷಯ ಎಂದರು.

ಇಲ್ಲಿ ಯಾರೂ ಏನು ಬೇಕಾದರೂ ಮಾಡಬಹುದು ಎಂಬ ಮನಸ್ಥಿತಿಗೆ ಬಂದ ಹಿನ್ನಲೆಯಲ್ಲಿ ಈ ಘಟನೆಗಳು ಪದೇ ಪದೇ ಸಂಭವಿಸುತ್ತಿವೆ. ಈಗಾಗಲೇ ನಮ್ಮ ನಾಯಕ ಕೆ.ಎಸ್.ಈಶ್ವರಪ್ಪ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಕಾನೂನು ಸುವ್ಯವಸ್ಥೆ ಕಾಪಾಡಬೇಕೆಂದು ಮನವಿ ಮಾಡಿದ್ದಾರೆ. ಶಿವಮೊಗ್ಗದ ಪೊಲೀಸ್ ವ್ಯವಸ್ಥೆ ಸರಿಪಡಿಸಬೇಕಿದೆ. ಉವೆಲ್ಲವನ್ನೂ ಸಿಎಂ ಗಮನಕ್ಕೆ ತರಲಾಗುವುದು ಎಂದರು.

10 ನಿಮಿಷ ತಡವಾಗಿದ್ರು ಕಷ್ಟ ಆಗ್ತಿತ್ತು: ಚಾಕು ಚುಚ್ಚಿದ ಬಳಿಕ ಪ್ರೇಮ್‌ಸಿಂಗ್‌ಗೆ ಬೈಕ್‌ನಲ್ಲಿ ಬಂದು ಮೆಗ್ಗಾನ್‌ಗೆ ದಾಖಲಾಗಿದ್ದಾರೆ. 10 ನಿಮಿಷ ತಡವಾಗಿ ಅಸ್ಪತ್ರೆಗೆ ಬಂದಿದ್ದರೂ ಆತ ಉಳಿಯುವುದು ಕಷ್ಟಕರವಾಗಿತ್ತು. ವೈದ್ಯರ ಶ್ರಮದಿಂದ ಪ್ರೇಮ್ಸಿಂಗ್ ಸದ್ಯಕ್ಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೂ 8ರಿಂದ 10 ದಿನ ತೀವ್ರ ನಿಗಾದಲ್ಲಿರುವಬೇಕಿದೆ ಎಂದರು.