ಜಿಲ್ಲೆ

ಪ್ರತ್ಯೇಕತೆ ಸಿದ್ದರಾಮಯ್ಯ ಅವರಿಗೆ ರಕ್ತಗತ: ಈಶ್ವರಪ್ಪ ವ್ಯಂಗ್ಯ

ಶಿವಮೊಗ್ಗ: ಪ್ರತ್ಯೇಕ ಸಭೆ, ಸಮಾವೇಶ ನಡೆಸುವುದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹುಟ್ಟು ಗುಣ. ಜೆಡಿಎಸ್‌ನಲ್ಲಿ ದೇವೇಗೌಡರ ಜತೆಗಿದ್ದಾಗಲೇ ಪ್ರತ್ಯೇಕವಾಗಿ ಅಹಿಂದ ಸಮಾವೇಶ ನಡೆಸಿದವರು ಅವರು ಎಂದು ಬಿಜೆಪಿ ಒಬಿಸಿ ಮೋರ್ಚಾದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷರ ಎದುರು ನಾನು ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒಟ್ಟಿಗೇ ಸಭೆಗಳನ್ನು ಮಾಡುತ್ತೇವೆ ಎಂದು ಮಾತು ನೀಡಿದ್ದ ಸಿದ್ದರಾಮಯ್ಯ ಬೆಂಗಳೂರಿಗೆ ಬಂದು ತಮ್ಮ ಆಪ್ತರೊಂದಿಗೆ ಪ್ರತ್ಯೇಕ ಸಭೆ ನಡೆಸಿದ್ದಾರೆ. ಪ್ರತ್ಯೇಕತೆ ಎಂಬುದು ಅವರಿಗೆ ರಕ್ತಗತವಾಗಿ ಬಂದಿದೆ ಎಂದರು.

ರಾಜಕೀಯ ಪಕ್ಷ ಎಂದ ಮೇಲೆ ಪರಸ್ಪರ ಭಿನ್ನಾಭಿಪ್ರಾಯ ಸಹಜ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಇದಕ್ಕೆ ಹೊರತಲ್ಲ. ಆದರೆ ನಾಯಕರು ಕೊಡುವ ಸೂಚನೆಗಳನ್ನು ಎಲ್ಲರೂ ಪಾಲಿಸಬೇಕು. ಒಂದಾಗಿ ಪಕ್ಷ ಸಂಘಟಿಸಿ ಎಂದು ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ಸೂಚನೆ ನೀಡಿರುವುದು ಕಾಂಗ್ರೆಸ್ ದೃಷ್ಟಿಯಿಂದ ಒಳ್ಳೆಯದು. ಆದರೆ ಅದನ್ನು ಸಿದ್ದರಾಮಯ್ಯ ಎಷ್ಟರ ಮಟ್ಟಿಗೆ ಪಾಲಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ ಎಂದರು.

ಜೆಡಿಎಸ್ ಪಂಚರತ್ನ ಯಾತ್ರೆ ಆರಂಭಿಸಿದೆ. ಇನ್ನೊಂದೆಡೆ ಆಪ್ ಕೂಡಾ ಸಕ್ರಿಯವಾಗಿದೆ. ಇವೆರಡೂ ಪಕ್ಷಗಳು ಮುಸ್ಲಿಂ ಮತಗಳನ್ನು ಸೆಳೆಯುವ ಬಗ್ಗೆ ಈಗ ಕಾಂಗ್ರೆಸ್‌ಗೆ ಆತಂಕ ಎದುರಾಗಿದೆ. ಮುಸ್ಲಿಂ ಮತಗಳನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಹೆಣಗಾಡುತ್ತಿದೆ ಎಂದು ಹೇಳಿದರು.