ಜಿಲ್ಲೆ

ಸಿದ್ದರಾಮಯ್ಯ ಮೀಸಲಾತಿ ವಿರೋಧಿ: ಕೆ.ಎಸ್.ಈಶ್ವರಪ್ಪ ವಾಗ್ದಾಳಿ

Shivamogga

ಶಿವಮೊಗ್ಗ: ವಿಧಾನಸಭೆ ಪ್ರತಿಪಕ್ಷ ನಾಯಕ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಮೀಸಲಾತಿ ವಿರೋಧಿಸುತ್ತಾರೆ. ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದರೂ ಅಪಸ್ವರ ವ್ಯಕ್ತಪಡಿಸುತ್ತಿದ್ದಾರೆ. ಇವರು ಮೀಸಲಾತಿ ವಿರೋಧಿಯೇ? ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಖಾರವಾಗಿ ಪ್ರಶ್ನಿಸಿದರು.

ಎಸ್ಸಿ ಎಸ್ಟಿ, ಮೀಸಲಾತಿ ಹೆಚ್ಚಳ ಸಂಬಂಧ ಸರ್ವಪಕ್ಷ ಸಭೆಯಲ್ಲಿ ಸಹಮತ ವ್ಯಕ್ತಪಡಿಸಿದ್ದ ಸಿದ್ದರಾಮಯ್ಯ, ಈಗ ಅಪಸ್ವರ ವ್ಯಕ್ತಪಡಿಸುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಮೀಸಲಾತಿ ನೀಡಬೇಕೆಂದು ಲೋಕಸಭೆ, ರಾಜ್ಯಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗಿದೆ. ಈಗ ಅದನ್ನೇ ವಿರೋಧಿಸುವ ಮೂಲಕ ಸಿದ್ದರಾಮಯ್ಯ ಸಂವಿಧಾನ ವಿರೋಧಿಯಾಗಿ ವರ್ತಿಸುತ್ತಿದ್ದಾರೆ. ಅವರು ತನ್ನನ್ನು ಸರ್ವಜ್ಞನೆಂದು ಭಾವಿಸಿದಂತಿದೆ ಎಂದು ವ್ಯಂಗ್ಯವಾಡಿದರು.

ಅರ್ಜಿ ವಿಸ್ತರಣೆ ಏಕೆ?

ವಿಧಾನಸಭೆ ಟಿಕೆಟ್‌ಗಾಗಿ ಅರ್ಜಿ ಹಾಕಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೂಚನೆ ನೀಡಿರುವುದು ಎಲ್ಲಿಗೆ ಹೋಗಿ ಮುಟ್ಟುತ್ತದೋ ಗೊತ್ತಿಲ್ಲ. ಈಗಾಗಲೇ ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಿಸಿರುವುದು ಮತ್ತಷ್ಟು ಹಣ ಸಂಗ್ರಹವಾಗಲಿ ಎಂಬ ಕಾರಣಕ್ಕಾಗಿ ಇರಬಹುದೇನೋ ಎಂದು ಕೆ.ಎಸ್.ಈಶ್ವರಪ್ಪ ಲೇವಡಿ ಮಾಡಿದರು.

ಕಾಂಗ್ರೆಸ್‌ನಲ್ಲಿರುವ ಆರ್ಥಿಕ ದುರ್ಬಲರು ಹಣ ನೀಡಿ, ಅರ್ಜಿ ಸಲ್ಲಿಸಿ ಟಿಕೆಟ್ ಪಡೆಯಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಸಿದ್ದರಾಮಯ್ಯ ಇನ್ನೂ ಅರ್ಜಿ ಹಾಕಿಲ್ಲ. ಬಹುಶಃ ಕ್ಷೇತ್ರ ಯಾವುದೆಂದು ನಿರ್ಣಯವಾಗದ ಕಾರಣ ಅವರು ಅರ್ಜಿ ಹಾಕದೇ ಇರಬಹುದು. ಸಿದ್ದರಾಮಯ್ಯ ಅಲೆಮಾರಿಯಂತಾಗಿದ್ದಾರೆ. ಪ್ರತಿಪಕ್ಷ ನಾಯಕನಿಗೆ ಇದು ಶೋಭೆ ತರುವಂತಾದ್ದಲ್ಲ ಎಂದು ಹೇಳಿದರು.