ಜಿಲ್ಲೆ

ನಾಟಕಗಳಿಂದ ಜ್ಞಾನದ ಅರಿವು ವಿಸ್ತಾರ: ವಿಜಯಲಕ್ಷ್ಮೀ

ಶಿವಮೊಗ್ಗ: ನಾಟಕದಿಂದ ಶೈಕ್ಷಣಿಕ ಲಾಭವಿದ್ದು ನಾಟಕಗಳು ಜನರಲ್ಲಿ ಜ್ಞಾನದ ಅರಿವನ್ನು ವಿಸ್ತರಿಸಲು ಸಹಕಾರಿ ಆಗಿವೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ, ಕಿರುತೆರೆ ನಟಿ ಎಸ್.ಆರ್.ವಿಜಯಲಕ್ಷ್ಮೀ ಹೇಳಿದರು.

ಕುವೆಂಪು ರಂಗಮಂದಿರದಲ್ಲಿ ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಶನಿವಾರ ಮಕ್ಕಳ ರಂಗೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ನಾಟಕಗಳು ಎಂಬ ತಾತ್ಸಾರ ಬೇಡ. ನಾಟಕಗಳು ಜೀವನದ ಒಂದು ಭಾಗವೇ ಆಗಿದೆ ಎಂದರು.

ಇದು ಸಂಸ್ಕೃತಿಯ ಜಾಗೃತಿ ಪರಿಸರ ಪ್ರಜ್ಞೆ ಪುರಾಣಗಳ ಅರಿವು, ಪರಂಪರೆಯ ಜ್ಞಾನ, ಧೈರ್ಯ, ಹೊಂದಾಣಿಕೆ ಶಿಸ್ತು, ನಾಯಕತ್ವ ಗುಣ ಜೀವನಕ್ಕೆ ಬೇಕಾದ ಉತ್ತಮ ಅಂಶಗಳು ಕಲಿಯುವಿಕೆಗೆ ಸಹಾಯ, ಹೀಗೆ ಹಲವು ಪ್ರಯೋಜನಗಳು ನಾಟಕ ನೋಡುವುದರಿಂದ ಪ್ರಾಪ್ತವಾಗುತ್ತದೆ ಎಂದು ಹೇಳಿದರು.

ಕಳೆದೆರಡು ವರ್ಷಗಳಲ್ಲಿ ಕರೊನಾದಿಂದ ನಾಡಹಬ್ಬ ದಸರಾ ಕಳಾಹೀನವಾಗಿತ್ತು. ಈ ವರ್ಷ ಮತ್ತೆ ಸಂಭ್ರಮ ಮನೆ ಮಾಡಿದೆ. ರಾಜ್ಯದೆಲ್ಲೆಡೆ ದಸರಾವನ್ನು ಅತ್ಯಂತ ವಿಜೃಂಭಣೆಯಿದ ಆಚರಿಸಲಾಗುತ್ತಿದೆ. ಶಿವಮೊಗ್ಗ ದಸರಾ ಕೂಡ ಮನೆ ಮಾತಾಗಿದೆ. ಸರ್ಕಾರಿ ಶಾಲೆ ಮಕ್ಕಳು ನಾಟಕ ಕಲಿತು ಅಭಿನಯಿಸುತ್ತಿರುವುದು ಅಭಿನಂದನೀಯ ವಿಷಯ ಎಂದರು.

ಉಪ ಮೇಯರ್ ಶಂಕರ್‌ಗನ್ನಿ ಮಾತನಾಡಿ, ನಾಟಕ ಜೀವನಕ್ಕೆ ಹತ್ತಿರವಾಗಿರುತ್ತವೆ. ಅದು ಬದುಕನ್ನು ಪ್ರೀತಿಸುವಂತೆ ಮಾಡುತ್ತವೆ. ಮಕ್ಕಳು ಪಠ್ಯದ ಜೊತೆಗೆ ನಾಟಕ ಸೇರಿದಂತೆ ಹಲವು ವಿಷಯ ಗಳತ್ತ ಗಮನ ಹರಿಸಬೇಕು ಎಂದರು. ರಂಗ ನಿರ್ದೇಶಕ ಕೊಟ್ರಪ್ಪ ಜಿ. ಹಿರೆಮಾಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಂಗ ದಸರಾ ಸಮಿತಿ ಅಧ್ಯಕ್ಷ ಎಂ.ಎಚ್.ಶಿರೀಶ್, ಪಾಲಿಕೆ ಆಡಳಿತ ಪಕ್ಷದ ನಾಯಕ ಎಸ್.ಎನ್.ಚನ್ನಬಸಪ್ಪ, ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ, ಬಿಇಒ ನಾಗರಾಜ್, ಲೋಕೇಶ್ವರಪ್ಪ, ಎಚ್.ಮೂರ್ತಿ, ಕಾಂತೇಶ್ ಕದರಮಂಡಲಗಿ, ಹರಿಗೆ ಗೋಪಾಲಸ್ವಾಮಿ ಉಪಸ್ಥಿತರಿದ್ದರು.