ಜಿಲ್ಲೆ

ಭಯೋತ್ಪಾದಕರಿಗೆ ಆಶ್ರಯ ಕಲ್ಪಿಸಿದ್ದೇ ಕಾಂಗ್ರೆಸ್: ಸಚಿವ ಅಶ್ವತ್ಥ್ ನಾರಾಯಣ ಕಿಡಿ

Shivamogga

ಶಿವಮೊಗ್ಗ: ದೇಶದಲ್ಲಿ ಭಯೋತ್ಪಾದಕರಿಗೆ ಆಶ್ರಯ ಕಲ್ಪಿಸಿದ್ದು ಮತ್ತು ಭ್ರಷ್ಟಚಾರಕ್ಕೆ ಹುಟ್ಟುಹಾಕಿದ್ದೇ ಕಾಂಗ್ರೆಸ್. ಅದರಲ್ಲೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ರಕ್ತದ ಕಣ ಕಣದಲ್ಲೂ ಭ್ರಷ್ಟಾಚಾರ ಅಡಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವತ್ಥ್ ನಾರಾಯಣ ಕಿಡಿಕಾರಿದರು.

ಅಧಿಕಾರಕ್ಕೆ ಬಂದ ಮೇಲೆ ವಿಧಾನಸೌಧವನ್ನು ಗಂಗಾಜಲದಿಂದ ಶುದ್ಧೀಕರಣ ಮಾಡುತ್ತೇವೆಂದು ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ. ಅವರ ಈ ಹೇಳಿಕೆ ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತಿದೆ. ಗಂಗಾಜಲ ಮಾತ್ರವಲ್ಲದೇ ಗೋಮೂತ್ರ ಬಳಸಿ ಅವರೇ ಸ್ನಾನ ಮಾಡಬೇಕಿದೆ. ಬರೀ ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ಅವರೇ ಶುದ್ಧೀಕರಣವಾಗಬೇಕಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮಧ್ಯವರ್ತಿಗಳ ಹಾವಳಿ ಹೆಚ್ಚಿತ್ತು. ಅವರ ಕಾಲದಲ್ಲಿ ಸರ್ಕಾರ 100 ರೂ. ಕೊಟ್ಟರೇ ಫಲಾನುಭವಿಗಳಿಗೆ 20 ರೂ. ಕೂಡ ತಲುಪುತ್ತಿರಲಿಲ್ಲ. ಆದರೆ ಬಿಜೆಪಿ ಸರ್ಕಾರ 100ಕ್ಕೆ ನೂರಷ್ಟು ಮೊತ್ತವನ್ನು ಫಲಾನುಭವಿಗಳ ಖಾತೆಗೆ ತಲುಪುವಂತೆ ಮಾಡಿದೆ. ಆಡಳಿತ ಸೇರಿದಂತೆ ಪ್ರತಿಯೊಂದು ಹಂತದಲ್ಲೂ ಪಾರದರ್ಶಕತೆ ತರಲಾಗುತ್ತಿದೆ ಎಂದರು.

ಸೌಲಭ್ಯಗಳು ಜನರಿಗೆ ತಲುಪಬೇಕೆಂದು ಬಿಜೆಪಿ ಹಸ್ತಕ್ಷೇಪ ಇಲ್ಲದೇ ಅಧಿಕಾರ ವಿಕೇಂದ್ರೀಕರಣ ಮಾಡುತ್ತಿದೆ. ಅಧಿಕಾರ ಒಬ್ಬರ ಹಿಡಿತದಲ್ಲಿ ಇರದೇ ಯೋಜನೆಗಳ ಸಬಲೀಕರಣಗೊಳಿಸುವ ಪ್ರಯತ್ನಕ್ಕೆ ಮತ್ತಷ್ಟು ವೇಗ ಹೆಚ್ಚಿಸುವ ಕೆಲಸವನ್ನು ಮಾಡಲಾಗುತ್ತಿದೆ. ಭಯೋತ್ಪಾದಕರಿಗೆ ಆಶ್ರಯ, ಅಧಿಕಾರ ದುರ್ಬಳಕೆಯನ್ನು ಮಾಡಿದ್ದು ಕಾಂಗ್ರೆಸ್. ಡಿ.ಕೆ.ಶಿವಕುಮಾರ್ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಮಾಜಿ ಸಿಎಂ ಆಗಿರುವ ಸಿದ್ದರಾಮಯ್ಯ ಅವರು ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಸಿಎಂಗೆ ನಾಯಿಮರಿ ಎಂದು ಕರೆದು ಸಿಎಂ ಸ್ಥಾನಕ್ಕೂ ಅವಮಾನ ಮಾಡಿದ್ದಾರೆ. ಅವರಿಗೆ ಮುಂದಿನ ಚುನಾವಣೆಯಲ್ಲಿ ರಾಜ್ಯದ ಜನರು ಉತ್ತರ ಕೊಡುತ್ತಾರೆ ಎಂದು ಹೇಳಿದರು.

ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಎಂಎಲ್‌ಸಿಗಳಾದ ಆಯನೂರು ಮಂಜುನಾಥ, ಎಸ್.ರುದ್ರೇಗೌಡ, ಡಿ.ಎಸ್.ಅರುಣ್, ರಾಜ್ಯ ಉಪಾಧ್ಯಕ್ಷ ಎಂ.ಬಿ.ಭಾನುಪ್ರಕಾಶ್, ಮುಖಂಡರಾದ ಎಸ್.ದತ್ತಾತ್ರಿ, ಆರ್.ಕೆ.ಸಿದ್ದರಾಮಣ್ಣ, ಗಿರೀಶ್ ಪಟೇಲ್, ಶಿವರಾಜ್, ಮೇಯರ್ ಎಸ್.ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.