ಜಿಲ್ಲೆ

ಮೃತ ಕಾರ್ಯಕರ್ತನ ಕುಟುಂಬದೊಂದಿಗಿದ್ದೇವೆ: ಮೇಘರಾಜ್

Shivamogga

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಫೆ.27ರಂದು ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಆಗಮಿಸಿದ್ದ ಸಂದರ್ಭದಲ್ಲಿ ಆರೋಗ್ಯದ ಏರುಪೇರಿನಿಂದಾಗಿ ನಮ್ಮ ಪಕ್ಷದ ಹಿರಿಯ ಕಾರ್ಯಕರ್ತ ಸೊರಬ ತಾಲೂಕಿನ ಮಲ್ಲಿಕಾರ್ಜುನ ಎಂಬುವವರು ಸಾವನ್ನಪ್ಪಿರುವುದು ದುರದೃಷ್ಟಕರ. ಅವರ ಕುಟುಂಬಕ್ಕೆ ಪಕ್ಷ ಹಾಗೂ ಸಂಘಟನೆ ಸಹಕಾರವಾಗಿ ನಿಲ್ಲಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಭರವಸೆ ನೀಡಿದರು.

ಈಗಾಗಲೇ ಸೊರಬ ಶಾಸಕ ಕುಮಾರ್ ಬಂಗಾರಪ್ಪ ಮಲ್ಲಿಕಾರ್ಜುನ ಅವರ ಮನೆಗೆ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಒಂದೆರಡು ದಿನಗಳಲ್ಲಿ ಅವರ ಮನೆಗೆ ಭೇಟಿ ನೀಡಲಿದ್ದಾರೆ. ಆ ಕುಟುಂಬಕ್ಕೆ ಯಾವ ರೀತಿಯಲ್ಲಿ ಬೆಂಬಲ ನೀಡಬಹುದು ಎಂಬ ಬಗ್ಗೆ ಸಂಘಟನೆ ವೇದಿಕೆಯಲ್ಲಿ ಚರ್ಚಿಸಿ ತೀರ್ಮಾನಿಸುತ್ತೇವೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮೋದಿ ಹಾಗೂ ಬಿ.ಎಸ್.ಯಡಿಯೂರಪ್ಪ ಅವರನ್ನು ಕಾಣಲು ನೆರೆಯ ಜಿಲ್ಲೆಗಳಿಂದಲೂ ಅಂದಿನ ಕಾರ್ಯಕ್ರಮಕ್ಕೆ ಜನರು ಬಂದಿದ್ದರು. ಕಾರ್ಯಕ್ರಮ ಅಭೂತಪೂರ್ವ ಯಶಸ್ಸು ಕಂಡಿತು. ಆದರೆ ನಮ್ಮ ನಿರೀಕ್ಷೆ ಮೀರಿ, ಸಿದ್ಧತೆಯನ್ನೂ ಹೊರತುಪಡಿಸಿ ಜನರು ಆಗಮಿಸಿದ್ದರಿಂದ ಮಧ್ಯಾಹ್ನದ ಊಟ ಹಾಗೂ ವಾಹನ ಸಂಚಾರದಲ್ಲಿ ವ್ಯತ್ಯಯವಾಗಿದ್ದು ದುರದೃಷ್ಟಕರ ಎಂದರು.

ನಾವು ಯಾವ ರೀತಿಯಲ್ಲಿ ಯಶಸ್ಸನ್ನು ಹೆಗಲಿಗೇರಿಸಿಕೊಳ್ಳುತ್ತೇವೆಯೋ, ಅದೇ ರೀತಿ ಆ ಕಾರ್ಯಕ್ರಮದಲ್ಲಾದ ನ್ಯೂನತೆಗಳಿಗೂ ಹೊಣೆಗಾರರಾಗಿದ್ದೇವೆ. ಮೋದಿ ಅವರಿಗೆ ಜೀವ ಬೆದರಿಕೆ ಇರುವುದರಿಂದ ಅವರಿಗೆ ಉನ್ನತ ಮಟ್ಟದ ರಕ್ಷಣೆ ಒದಗಿಸುವುದು ಅನಿವಾರ್ಯವಾಗಿತ್ತು. ಎಸ್‌ಪಿಜಿ ಆದೇಶದಂತೆ ನೀರಿನ ಬಾಟಲಿಗಳನ್ನೂ ಹಂಚಲು ಅವಕಾವಿರಲಿಲ್ಲ. ಕೆಲ ತೊಂದರೆಗಳ ನಡುವೆಯೂ ಎಲ್ಲರ ಸಹಕಾರದಿಂದ ಆ ಕಾರ್ಯಕ್ರಮ ಇತಿಹಾಸದ ಪುಟದಲ್ಲಿ ಸೇರಿದೆ ಎಂದು ಹೇಳಿದರು.