ಗಂಡಸಿ: ಹೋಬಳಿಯ ಯರಗನಾಳು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಲಾಳನಕೆರೆ ಶಿವಲಿಂಗೇಗೌಡ ಮತ್ತು ಉಪಾಧ್ಯಕ್ಷರಾಗಿ ದೊಡ್ಡ ಯರಗನಾಳು ನಂಜೇಶ್ ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು.
ಸಂಘದ ಕಚೇರಿಯಲ್ಲಿ ಶುಕ್ರವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಶಿವಲಿಂಗೇಗೌಡ ಮತ್ತು ನಂಜೇಶ್ ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆ ನಡೆಯಿತು.
ನೂತನ ಅಧ್ಯಕ್ಷ ಲಾಳನಕೆರೆ ಶಿವಲಿಂಗೇಗೌಡ ಮಾತನಾಡಿ, ನನ್ನ ಅವಧಿಯಲ್ಲಿ ಸಹಕಾರ ಸಂಘಕ್ಕೆ ಒಳಪಡುವ ಎಲ್ಲ ಹಳ್ಳಿಯ ರೈತರಿಗೆ ಅನುಕೂಲ ಮಾಡಿಕೊಡಬೇಕಿದೆ. ಈ ನಿಟ್ಟಿನಲ್ಲಿ ಸಂಘದ ನಿರ್ದೇಶಕರು, ಹಿರಿಯರು ರೈತರ ಅಭ್ಯುದಯಕ್ಕಾಗಿ ಪಕ್ಷಾತೀತ ಮತ್ತು ಜಾತ್ಯತೀತವಾಗಿ ಸಹಕರಿಸಬೇಕು. ಶಾಸಕ ಕೆ.ಎಂ.ಶಿವಲಿಂಗೇಗೌಡರ ಮಾರ್ಗದರ್ಶನದಲ್ಲಿ ಹೆಚ್ಚಿನ ಸಾಲ ಸೌಲಭ್ಯಗಳನ್ನು ಕೊಡಿಸುವ ಮೂಲಕ ರೈತರು ಮತ್ತು ಸಂಘವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಶ್ರಮಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗ್ರಾ.ಪಂ ಮಾಜಿ ಅಧ್ಯಕ್ಷ ಯರಗನಾಳು ಮಲ್ಲೇಶ್, ಗಂಡಸಿ ಹೋಬಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಶಲ್ ಕುಮಾರ್, ಗುತ್ತಿಗೆದಾರ ಲಿಂಗಾಪುರ ವಾಸುದೇವ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಗಂಡಸಿ ಅಯ್ಯಣ್ಣ, ತಾ.ಪಂ. ಮಾಜಿ ಸದಸ್ಯ ಪೂರ್ಣಚಂದ್ರ, ಈಶ್ವರಪ್ಪ, ಎಪಿಎಂಸಿ ಮಾಜಿ ಸದಸ್ಯ ಜಯರಾಮು, ಮಂಜೇನಹಳ್ಳಿ ಜಟ್ಟಿ ಗೌಡ, ನಾಗರಹಳ್ಳಿ ವೆಂಕಟೇಶ್ ಇತರರು ಹಾಜರಿದ್ದರು.