ಶಿಗ್ಗಾಂವಿ: ನಡೆ-ನುಡಿ ಹಾಗೂ ಆಚಾರ ವಿಚಾರಗಳ ಸಮ್ಮಿಲಿತ ಜೀವನ ಸವೆಸಿದ ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಆಧ್ಯಾತ್ಮಿಕ ತಳಹದಿಯಡಿ ಮಾನವೀಯ ಮೌಲ್ಯಗಳನ್ನು ಬೆಳೆಸುವ ಮೂಲಕ ಶೈಕ್ಷಣಿಕ ಕಾಳಜಿ ಪ್ರದರ್ಶಿಸಿದರು ಎಂದು ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಬಳಗದ ಸುರೇಶ ಅರಳಿಕಟ್ಟಿ ಹೇಳಿದರು.
ತಾಲೂಕಿನ ಮುಗಳಿ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಪ್ರೌಢಶಾಲೆಯಲ್ಲಿ ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಬಳಗದಿಂದ ಮಂಗಳವಾರ ಆಯೋಜಿಸಿದ್ದ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರ 118ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಿದ್ಧಗಂಗಾ ಮಠದ ಶಿವಕುಮಾರ ಮಹಾಸ್ವಾಮಿಗಳು ಬಡ ಹಾಗೂ ಶೋಷಿತ ಸಮುದಾಯದ ಮಕ್ಕಳ ಶೈಕ್ಷಣಿಕ ಶ್ರೇಯಸ್ಸಿಗೆ ತಮ್ಮ ಬದುಕನ್ನು ಮುಡಿಪಿಟ್ಟಿದ್ದರು. ಬರಗಾಲದಂಥ ಭೀಕರ ದಿನಗಳಲ್ಲೂ ಜೋಳಿಗೆ ಹಿಡಿದು ಮಠದಲ್ಲಿ ಆಶ್ರಯ ಪಡೆದಿದ್ದ ಮಕ್ಕಳ ಹಸಿವನ್ನು ಇಂಗಿಸಿದ್ದರು. ಜೊತೆಗೆ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಿದ್ದರು. ಅವರ ಜೀವನ ನಮಗೆಲ್ಲ ಅನುಕರಣೀಯ ಎಂದರು.
ಶಿಕ್ಷಕ ಶಾಂತಪ್ಪ ಮೂಡಲದವರ ಮಾತನಾಡಿ, ದೈವಾಂಶ ಸಂಭೂತರು ಹಾಗೂ ಲಿಂಗಪೂಜಾ ನಿಷ್ಠರೂ ಆಗಿದ್ದ ಶಿವಕುಮಾರ ಮಹಾಸ್ವಾಮಿಗಳು ಮಠದ ವಿದ್ಯಾರ್ಥಿಗಳ ಹೊಟ್ಟೆ ಮತ್ತು ಜ್ಞಾನದ ಹಸಿವನ್ನು ಇಂಗಿಸಿ ಲೋಕಕ್ಕೆ ಮಾದರಿಯಾದರು. ಸಿದ್ಧಗಂಗಾ ಮಠದಲ್ಲಿದ್ದು, ಅಧ್ಯಯನ ಮಾಡಿದ ಪ್ರತಿಯೊಬ್ಬರೂ ಧನ್ಯರು ಎಂದರು.
ಶಿಕ್ಷಕರಾದ ವಿಜಯ ದೇಶಪಾಂಡೆ, ಬಿ.ಜಿ. ಕಂಕಣವಾಡ, ಕಸ್ತೂರಿ ಗೌರಿಹಳ್ಳಿ, ಲಕ್ಷ್ಮೀ ಕಲಕೋಟಿ, ಶೀಲಾ ಪಾಟೀಲ, ಪ್ರತಿಭಾ ತಿಮ್ಮಾಪುರ, ಎ. ಮೀರಾಬಾಯಿ, ವಿಶಾಲಾಕ್ಷಿ ಮಂಟೂರ, ಮಂಜುಳಾ ಎಫ್.ವಿ., ಕವಿತಾ ಭರಮಗೌಡ್ರ, ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಬಳಗದ ನಾಗರಾಜ ರಾಮಗೇರಿ, ನಾಗರಾಜ ಕೂಡಲ, ಶಿವಾನಂದ ಡವಗಿ, ಎಸ್ಡಿಎಂಸಿ ಅಧ್ಯಕ್ಷ ಸೋಮಣ್ಣ ಸಕ್ರಿ, ನಾಗನಗೌಡ ಪಾಟೀಲ, ಮಹಾಂತೇಶ ಗೊಬ್ಬಿ, ಇತರರಿದ್ದರು.
ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಬಳಗದ ಅಧ್ಯಕ್ಷ ಶಿವಪ್ಪ ಅರಳಿಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಈಶ್ವರ ಕಾಲವಾಡ, ಚಂದ್ರು ದುಂಡಪ್ಪನವರ ಕಾರ್ಯಕ್ರಮ ನಿರ್ವಹಿಸಿದರು.