ಹಲಗೂರು: ಸಮೀಪದ ಹುಲ್ಲಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಚ್.ಎಂ. ಶಿವಕುಮಾರ್ ಮತ್ತು ಉಪಾಧ್ಯಕ್ಷರಾಗಿ ಎಚ್.ಎಸ್.ಪ್ರಕಾಶ್ ಅವರು ಅವಿರೋಧವಾಗಿ ಆಯ್ಕೆಯಾದರು.
ಹತ್ತು ನಿರ್ದೇಶಕರ ಬಲದ ಸಂಘದ ಆಡಳಿತ ಮಂಡಳಿಗೆ ಸೋಮವಾರ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಎಚ್.ಎಂ.ಶಿವಕುಮಾರ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಎಚ್.ಎಸ್.ಪ್ರಕಾಶ್ ನಾಮಪತ್ರ ಸಲ್ಲಿಸಿದ್ದರು. ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಎಂ.ಸುಜಾತಾ ಅವಿರೋಧ ಆಯ್ಕೆ ಘೋಷಣೆ ಮಾಡಿದರು.
ನೂತನ ಅಧ್ಯಕ್ಷ ಶಿವಕುಮಾರ್ ಮಾತನಾಡಿ, ಪರಸ್ಪರ ಸಹಕಾರದೊಂದಿಗೆ ಸಂಘವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವುದು ನನ್ನ ಗುರಿಯಾಗಿದೆ. ಈ ಹಿಂದಿನ ಆಡಳಿತ ಮಂಡಳಿ ಆಡಳಿತಾವಧಿಯಲ್ಲಿ ಸಂಘದ ಡೇರಿ ನಿರ್ಮಿಸಲು ಸ್ವಂತ ನಿವೇಶನವನ್ನು ಖರೀದಿ ಮಾಡಲಾಗಿದೆ ಎಂದು ತಿಳಿಸಿದರು.
ಸಂಘದ ಡೇರಿ ನಡೆಸಲು ಅಗತ್ಯವಿರುವ ಸ್ವಂತ ಕಟ್ಟಡ ನಿರ್ಮಿಸಲು ಆಡಳಿತ ಮಂಡಳಿ ವತಿಯಿಂದ ಶ್ರಮಿಸಲಾಗುವುದು. ಸಂಘದ ಏಳಿಗೆಯಾಗಬೇಕಾದರೆ ಸಂಘದ ನಿರ್ದೇಶಕರು ಮತ್ತು ಸದಸ್ಯರ ಸಹಕಾರ ಅತ್ಯಂತ ಪ್ರಮುಖವಾದುದು. ಮುಂದಿನ ದಿನಗಳಲ್ಲಿ ಸಂಘದ ನಿರ್ದೇಶಕರು ಮತ್ತು ಸದಸ್ಯರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಎಚ್.ಎಂ.ಕುಮಾರ್, ಶಿವಮಾದೇಗೌಡ, ಎಚ್.ಎನ್.ಪುನೀತ್ ಕುಮಾರ್, ನಾಗೇಶ್, ನಾಗರತ್ನಾ, ಭಾನುಮತಿ, ಕೆಂಪಾಜಮ್ಮ, ಸುನಂದಮ್ಮ, ಕಾರ್ಯದರ್ಶಿ ರಮೇಶ್, ಗ್ರಾಮದ ಮುಖಂಡರಾದ ಪುಟ್ಟೇಗೌಡ, ಚನ್ನಬಸವೇಗೌಡ, ಶಿವಮಾದೇಗೌಡ, ಅರುಣ್ ಕುಮಾರ್ ಇದ್ದರು.