ಜಿಲ್ಲೆ

ಶಿವಾಜಿ ತತ್ತ್ವಾದರ್ಶ ಯುವಕರಿಗೆ ಸ್ಫೂರ್ತಿ

ಪ್ರಶಾಂತ ಹೂಗಾರ

ಅಥಣಿ: ಹಿಂದು ರಾಷ್ಟ್ರ ನಿರ್ಮಾಣಕ್ಕೆ ಅವಿರತವಾಗಿ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರ ತತ್ತ್ವಾದರ್ಶ ಹಾಗೂ ಮೌಲ್ಯಗಳು ಇಂದಿನ ಯುವ ಸಮುದಾಯಕ್ಕೆ ಸ್ಫೂರ್ತಿಯಾಗಿವೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಪಟ್ಟಣದ ಶಿವಾಜಿ ವೃತ್ತದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ಅವರ ಪ್ರತಿಮೆಗೆ ಗೌರವ ಸಲ್ಲಿಸಿ ಮಾತನಾಡಿ, ಶಿವಾಜಿ ಮಹಾರಾಜರು ಸಾಂಸ್ಕೃತಿಕ ಮತ್ತು ರಾಷ್ಟ್ರೀಯತೆ ಬಗ್ಗೆ ಅಪಾರ ಗೌರವ ಹಾಗೂ ಕಾಳಜಿ ಹೊಂದಿದ್ದರು. ಸಮಾಜದ ಸಾಮರಸ್ಯಕ್ಕೆ ಶಿವಾಜಿ ನೀತಿ ಇಂದಿಗೂ ಮಾದರಿ ಎಂದರು.

ಮರಾಠ ಸಮುದಾಯದ ಮುಖಂಡ ವಿನಾಯಕ ದೇಸಾಯಿ ಮಾತನಾಡಿ, ಶಿವಾಜಿ ಮಹಾರಾಜರು ಅತ್ಯುತ್ತಮ ನಾಯಕತ್ವ, ಆಡಳಿತ ತಂತ್ರ ಮತ್ತು ಪ್ರಬುದ್ಧ ಆಡಳಿತಕ್ಕೆ ಹೆಸರಾಗಿದ್ದರು. ಅವರ ಆಳ್ವಿಕೆಯಲ್ಲಿ ಆಡಳಿತ ಮತ್ತು ನ್ಯಾಯಾಲಯ ವಲಯಗಳಲ್ಲಿ ಪರ್ಷಿಯನ್ ಭಾಷೆಗಿಂತ ಮರಾಠಿ ಮತ್ತು ಸಂಸ್ಕೃತಕ್ಕೆ ಮೊದಲ ಆದ್ಯತೆ ನೀಡಿದ್ದರು ಎಂದರು.

ಮಾಜಿ ಶಾಸಕ ಶಹಜಹಾನ ಡೊಂಗರಗಾವ, ದಿಗ್ವಿಜಯ ಪವಾರದೇಸಾಯಿ, ಗಜಾನನ ಮಂಗಸೂಳಿ, ಬಾಹುಸಾಹೇಬ ಜಾಧವ, ಸಚಿನ್ ದೇಸಾಯಿ, ನಾನಾಸಾಹೇಬ ಜಾಧವ, ನಾನಾಸಾಬ ಅವತಾಡೆ, ಅವಿನಾಶ ಜಾಧವ, ಸಿದ್ದು ಪಾಟೀಲ ಇತರರಿದ್ದರು.