ಜಿಲ್ಲೆ

ನಾಳೆಯಿಂದ ಶಿವಗಂಗೆಯ ಪುಣ್ಯಕ್ಷೇತ್ರದ ಹೊನ್ನದೇವಿ ಜಾತ್ರೆ ; 21ರಂದು ರಥೋತ್ಸವ

Bengaluru Rural

ದಾಬಸ್‌ಪೇಟೆ: ಕಲ್ಲೆಲ್ಲ ಲಿಂಗ, ಹುಲ್ಲೆಲ್ಲ ಪತ್ರೆ, ನೀರೆಲ್ಲ ತೀರ್ಥ ಎಂಬ ನಾಣ್ನುಡಿಯಂತೆ ದಕ್ಷಿಣ ಕಾಶಿ ಶಿವಗಂಗೆಯ ಪುಣ್ಯಕ್ಷೇತ್ರದಲ್ಲಿರುವ ಹೊನ್ನಾದೇವಿ ಜಾತ್ರೆ ಏ.19ರಿಂದ ಒಂದು ವಾರ ನಡೆಯಲಿದೆ.

19ರಂದು ಮಂಗಳವಾರ ಹೊನ್ನಮ್ಮ ಗವಿಮಠ ಅಮ್ಮನವರ ಆರತಿ, 21ರಂದು ರಥೋತ್ಸವ, ಅಂದು ರಾತ್ರಿ 10 ಗಂಟೆಗೆ ಮುತ್ತಿನ ಪಲ್ಲಕ್ಕಿ ಉತ್ಸವ ಹಾಗೂ ತೇಪ್ಪೋತ್ಸವ, 22ರಂದು ರಾತ್ರಿ ರುದ್ರಾಕ್ಷಿ ಮಂಟಪೋತ್ಸವ, 23ರಂದು ಸಿಂಹವಾಹನ ಮತ್ತು ಕುದುರೆ ಉತ್ಸವ ಹಾಗೂ ರಸಮಂಜರಿ, 24ರಂದು ಪೀಠ ಪ್ರಭಾವಳಿ ಉತ್ಸವ, 25ರಂದು ಚಿತ್ರ ಮಂಟಪೋತ್ಸವ ಮತ್ತು ದರ್ಬಾರ್ ಅಲಂಕಾರ, 26ರಂದು ರಾತ್ರಿ ಹೂವಿನ ಪಲ್ಲಕ್ಕಿ ಮತ್ತು ದರ್ಬಾರ್ ಅಲಂಕಾರ, ಕನ್ನಡ ಸಂಸ್ಕೃತಿ ಇಲಾಖೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ, 27ರಂದು ರಾತ್ರಿ 12ಕ್ಕೆ ಮಹಾಸಂಪ್ರೋಕ್ಷಣೆ ಹಾಗೂ ಉತ್ಸವಗಳು ನಡೆಯುವುದರಿಂದ ತುಮಕೂರು, ಬೆಂಗಳೂರು ಹಾಗೂ ರಾಮನಗರದಿಂದ ಸಾವಿರಾರು ಜನ ಬರುತ್ತಾರೆ.

ಬೆಟ್ಟದ ತುಂಬ ತೀರ್ಥದ ಗವಿಗಳು: ಪಾಪ-ಪುಣ್ಯ ನಿರ್ಧರಿಸುವ ಒಳಕಲ್ಲು ತೀರ್ಥ, ಕುಂಭಾವತಿ, ಪಾತಾಳಗಂಗೆ, ಹುಲಿಕಂಬ, ಸುತ್ತುವ ಬಸವಣ್ಣ, ಎತ್ತುವ ಬಸವಣ್ಣ, ತೋಪಿನ ಗಣಪ, ಮರಿಹೊನ್ನಮ್ಮ, ಕ್ಷೇತ್ರಾಧಿಪತಿ ಗಂಗಾಧರೇಶ್ವರಸ್ವಾಮಿ, ಹೊನ್ನದೇವಿ (ಸ್ವರ್ಣಾಂಬದೇವಿ), ವೀರಭದ್ರಸ್ವಾಮಿ, ನೂರೆಂಟು ಲಿಂಗಗಳನ್ನು ಸುತ್ತುವರಿದಿರುವ ಅಗಸ್ತ್ಯತೀರ್ಥ, ಕಲ್ಯಾಣಿ ಸೇರಿ ಇನ್ನೂ ಹತ್ತಾರು ಸ್ಥಳಗಳು ಭಕ್ತರನ್ನು ಆಕರ್ಷಿಸುತ್ತವೆ.

ಬಸರಿ ಕಂಬಕ್ಕೆ ಪೂಜೆ: ಸ್ವರ್ಣಾಂಬ ಜಾತ್ರೆ ನಿಮಿತ್ತ ಯುಗಾದಿ ಹಬ್ಬದ ಬಳಿಕ ಬರುವ ಮಂಗಳವಾರ ಸಂಜೆ ಶ್ರೀ ಗಂಗಾಧರೇಶ್ವರ ಹೊನ್ನದೇವಿ ದೇವಸ್ಥಾನದ ಮುಂಭಾಗ ಮೂರು ಕವಲು ಹೊಡೆದ ಬಸರಿ ಕಂಬ ನೆಟ್ಟು ಗರಿಗಳಿಂದ ಮುಚ್ಚುತ್ತಾರೆ. ಇದಕ್ಕೆ ಪ್ರತಿ ದಿನವೂ ಸಾಬ್ರಾಣಿ ಹೊಗೆ ಹಾಕುವುದು ಪೂರ್ವಜರ ಕಾಲದಿಂದಲೂ ನಡೆದು ಬಂದಿದೆ. ಹಾಗೆಯೇ ಈ ಕಂಬವನ್ನು ನಾಯಕ ಸಮುದಾಯದವರು ಪೂಜೆ ಮಾಡುತ್ತಾರೆ. ಪೂಜೆಗೆ ನೇಮಕವಾಗುವವರು 15 ದಿವಸ ಅವರ ಮನೆಗೆ ಹೋಗದೆ ಬ್ರಾಹ್ಮಣರ ಮನೆಯಲ್ಲಿ ಉಪಾಹಾರ ಸೇವಿಸುವುದು ವಾಡಿಕೆ. ಜಾತ್ರೆಯಂದು (ಏ.19) ಕಂಬವನ್ನು ತೆಗೆಯುತ್ತಾರೆ. ಕಂಬ ನೆಟ್ಟ ಬಳಿಕ ಸುತ್ತಮುತ್ತಲ ಗ್ರಾಮಸ್ಥರು ಮಾಂಸಹಾರ ಮಾಡುವುದಿಲ್ಲ. ಹಾಗೆಯೇ ಕಾರದ ಪುಡಿ, ಧನ್ಯ ಪುಡಿ ಗಿರಣಿ ಮಾಡಿಸುವುದೂ ನಿಷಿದ್ಧವಾಗಿರುವುದು ಇಲ್ಲಿಯ ವಿಶೇಷತೆಯಲ್ಲೊಂದಾಗಿದೆ.

ಹೊನ್ನದೇವಿ ದೇಗುಲ ಪ್ರಾಚಿನ ಇತಿಹಾಸ ಹೊಂದಿದ್ದು, ಮೂಲದಲ್ಲಿ ಹೊನ್ನಮ್ಮಗವಿ ಸಂಸ್ಥಾನ ಮಠದ ಒಳಪಟ್ಟಿದ್ದು, ಕಾಲನಂತರದಲ್ಲಿ ಮುಜರಾಯಿ ಇಲಾಖೆಗೆ ಸೇರಿದೆ. ಈಗಲೂ ಹೊನ್ನದೇವಿಗೆ ಆರತಿ ಮತ್ತು ಮುತ್ತಿನ ಪಲ್ಲಕ್ಕಿ ಉತ್ಸವ ಹಾಗೂ ತೇಪ್ಪೋತ್ಸವವನ್ನು ಮಠದಿಂದ ಮಾಡಿದ ನಂತರ ಸರ್ಕಾರದ ಪ್ರತಿನಿಧಿಗಳು ಮುಂದಿನ ಉತ್ಸವಕ್ಕೆ ಚಾಲನೆ ನೀಡುವರು. ಹೊನ್ನಮ್ಮಗವಿ ಮಠದಿಂದ ಮೂರು ದಿನ ವಿಶೇಷ ಕಾರ್ಯಕ್ರಮ ಆಯೋಜಿಸಲಾಗುವುದು. ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಹೊನ್ನಮ್ಮ ಗವಿ ಮಠದ ಅಧ್ಯಕ್ಷರು ಶಿವಗಂಗೆ ಎಂಬುದೇ ವಿಸ್ಮಯ. ನಾಲ್ಕು ದಿನಗಳಿಂದ ನಾಲ್ಕು ಆಕಾರವಾಗಿ ಕಾಣುತ್ತದೆ. ಬೆಟ್ಟದ ಮೇಲಿನ ಒಳಕಲ್ಲು ತೀರ್ಥದಲ್ಲಿ ಪಾಪ ಪುಣ್ಯದ ಆಧಾರದಲ್ಲಿ ನೀರು ಸಿಗುತ್ತದೆ. ತುಪ್ಪವನ್ನು ಗಂಗಾಧರೇಶ್ವರ ಲಿಂಗದ ಮೇಲೆ ಸವರಿದರೆ ಬೆಣ್ಣೆಯಾಗುತ್ತದೆ. ಶಿವಗಂಗೆ ಎಲ್ಲ ರೀತಿಯಲ್ಲೂ ವಿಸ್ಮಯವೇ ಸರಿ. ಶ್ರೀ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ, ಮೇಲಣಗವಿ ವೀರಸಿಂಹಾಸನ ಮಠದ ಅಧ್ಯಕ್ಷರು