ಜಿಲ್ಲೆ

ವಚನಗಳಿಂದ ಬದುಕಿಗೆ ಮಾರ್ಗದರ್ಶನ...

ಪ್ರಶಾಂತ ಜಿ. ಭಾಗ್ವತ

ದಿನಕರ ಹೇರೂರು ಅಭಿಪ್ರಾಯ

ಶಿವಶರಣ ಹಡಪದ ಅಪ್ಪಣ್ಣ ಜಯಂತಿ

ವಿಜಯವಾಣಿ ಸುದ್ದಿಜಾಲ ಉಡುಪಿ

ಬಸವಣ್ಣನ ಅನುಯಾಯಿಯಾಗಿದ್ದ ಶಿವಶರಣ ಹಡಪದ ಅಪ್ಪಣ್ಣ ಅವರೂ ಸಹ ಸಮಾಜದಲ್ಲಿದ್ದ ಮೌಢ್ಯ ವಿರೋಧಿಸಿ, ಸಮಾನತೆಗಾಗಿ ಹೋರಾಡಿ ನಾಡು-ನುಡಿಗೆ ಸೇವೆ ಸಲ್ಲಿಸಿದ್ದಾರೆ. ದಾರ್ಶನಿಕರ ವಚನಗಳು ಬದುಕಿಗೆ ಮಾರ್ಗದರ್ಶನವಾಗಿದ್ದು, ವಿಶೇಷವಾಗಿ ಯುವ ಸಮುದಾಯ ಅವುಗಳನ್ನು ಅಳವಡಿಸಿಕೊಳ್ಳಬೇಕು. ವಿವಿಧತೆಯ ನಾಡಿನಲ್ಲಿ ಉತ್ತಮ ಸಮಾಜ ನಿರ್ಮಿಸಲು ಮುಂದಾಗಬೇಕು ಎಂದು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಅಭಿಪ್ರಾಯಪಟ್ಟರು.

ಉಡುಪಿ ನಗರದಲ್ಲಿರುವ ಡಾ. ಟಿಎಂಎ ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಜುಲೈ 10ರಂದು ಆಯೋಜಿಸಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶ್ರಮ, ಗೌರವದ ತತ್ತ್ವ

ವಿದ್ಯಾಲಯದ ಪ್ರಾಂಶುಪಾಲ ಡಾ. ಮಹಾಬಲೇಶ್ವರ ರಾವ್​ ಮಾತನಾಡಿ, ಕಾಯಕವೇ ಶ್ರೇಷ್ಠ. ಅದರಲ್ಲಿ ಮೇಲ-ಕೀಳು ಎಂಬ ತಾರತಮ್ಯವಿಲ್ಲ. ಎಲ್ಲ ಕಾಯಕಗಳೂ ಸಮಾನತೆ ಹಾಗೂ ಸಹಬಾಳ್ವೆಗೆ ಪೂರಕವಾಗಿದೆ ಎನ್ನವುದನ್ನು ವಚನಕಾರರು ತಿಳಿಸಿದ್ದಾರೆ. ಶ್ರಮ, ಗೌರವದ ತತ್ತ್ವ ಪ್ರತಿಪಾದಿಸಿದ್ದಾರೆ. ವಚನಗಳನ್ನು ಓದಿ ಅದರ ಮೌಲ್ಯ ತಿಳಿದುಕೊಳ್ಳಬೇಕು ಎಂದರು.

ಸಾಂಸ್ಕೃತಿಕ ಚಿಂತಕ ಡಾ. ಶ್ರೀಕಾಂತ ಸಿದ್ದಾಪುರ ಅವರು ಶಿವಶರಣ ಹಡಪದ ಅಪ್ಪಣ್ಣ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ತೇಜಸ್​ ಜೆ. ಬಂಗೇರ ಕಾರ್ಯಕ್ರಮ ನಿರೂಪಿಸಿದರು.

ಸಮಾಜದಲ್ಲಿದ್ದ ಅಸಮಾನತೆ, ಅಸ್ಪೃಶ್ಯತೆ, ಮೂಢನಂಬಿಕೆ ನಿವಾರಿಸುವಲ್ಲಿ ಹಡಪದ ಅಪ್ಪಣ್ಣ ಅವರ ಶ್ರಮವೂ ಬಹಳ ಇದೆ. ಸಾಮಾಜಿಕ ಬದಲಾವಣೆಗಾಗಿ ಹೋರಾಡಿದ ಅವರ ಬದುಕು ಆದರ್ಶಮಯ. ಸಿದ್ಧಾಂತ ನಮ್ಮೆಲ್ಲರಿಗೂ ಸ್ಫೂರ್ತಿ ಮತ್ತು ಮಾದರಿ. | ಅಬೀದ್​ ಗದ್ಯಾಳ. ಅಪರ ಜಿಲ್ಲಾಧಿಕಾರಿ