ಸಿಂಧನೂರಿನಲ್ಲಿ ವಿಎಚ್‌ಪಿ, ಬಜರಂಗದಳ, ಹಿಂದು ಮಹಾಗಣಪತಿ ಉತ್ಸವ ಸಮಿತಿಯಿಂದ ಪ್ರತಿಷ್ಠಾಪಿಸಿರುವ ಬೃಹತ್ ಗಣೇಶಮೂರ್ತಿ. ನಿಡಿಶೇಷಿ, ಗುಡದೂರು ಶ್ರೀಮಠದ ಕರಿಬಸವ ಶಿವಾಚಾರ್ಯರು, ತುರ್ವಿಹಾಳ ಸರ್ವೇಶ್ವರಮಠದ ಗುಂಡಯ್ಯ ಅಪ್ಪಾಜಿ, ಗೌಡನಬಾವಿ ಅಮರೇಶ ತಾತ, ಉತ್ಸವ ಸಮಿತಿ ಗೌರವಾಧ್ಯಕ್ಷ ಬಸವರಾಜ ನಾಡಗೌಡ, ಅಧ್ಯಕ್ಷ ನೆಕ್ಕಂಟಿ ಸುರೇಶ ಇದ್ದರು.  
ಜಿಲ್ಲೆ

ಶಿವ-ಪಾರ್ವತಿ ಸುತನಿಗೆ ಅದ್ದೂರಿ ಸ್ವಾಗತ

ಸಿಂಧನೂರು: ನಗರ ಸೇರಿದಂತೆ ತಾಲೂಕಾದ್ಯಂತ ಬುಧವಾರ ಲಂಬೋದರ ಗಣೇಶನಿಗೆ ಅದ್ದೂರಿ ಸ್ವಾಗತ ಕೋರಲಾಯಿತು.

ನಗರದ ಗಂಗಾವತಿ ರಸ್ತೆ ಮಾರ್ಗದಲ್ಲಿ ವಿಶ್ವ ಹಿಂದು ಪರಿಷತ್, ಬಜರಂಗದಳ, ಹಿಂದು ಮಹಾಗಣಪತಿ ಉತ್ಸವ ಸಮಿತಿಯಿಂದ ಅತಿ ಎತ್ತರದ ಗಣಪತಿ ಮೂರ್ತಿಯನ್ನು ಶ್ರೀ ಗಣೇಶ ದೇವಸ್ಥಾನದಿಂದ ಪ್ರತಿಷ್ಠಾಪನೆ ಸ್ಥಳದವರೆಗೆ ಅದ್ದೂರಿ ಮೆರವಣಿಗೆ ನಡೆಸಿ, ನಂತರ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಲಾಯಿತು.

ಎಪಿಎಂಸಿ ಗಣೇಶ ದೇವಸ್ಥಾನದಲ್ಲಿ ಗಜಾನನ ಉತ್ಸವ ಸಮಿತಿ, ವರ್ತಕರ ಸಂಘದಿಂದ ವಿಶೇಷ ಪೂಜೆಯೊಂದಿಗೆ ಪ್ರತಿಷ್ಠಾಪಿಸಲಾಯಿತು. ವಿವಿ ನಗರ, ನಟರಾಜ ಕಾಲನಿ, ಪ್ರಶಾಂತನಗರ, ಹಳೇ ಬಜಾರ್, ಆದರ್ಶ ಕಾಲನಿ, ಬಸವ ನಗರ, ವೆಂಕಟೇಶ್ವರ ಕಾಲನಿ, ಗಂಗಾನಗರ, ಸುಕಾಲಪೇಟೆ, ಪಿಡಬ್ಲ್ಯುಡಿ ಕ್ಯಾಂಪ್ ಸೇರಿದಂತೆ ವಿವಿಧೆಡೆ ಗಣೇಶಮೂರ್ತಿಯನ್ನು ಶ್ರದ್ಧೆ, ಭಕ್ತಿಯಿಂದ ಪ್ರತಿಷ್ಠಾಪಿಸಲಾಯಿತು.

ತಾಲೂಕಿನ ಕುರುಕುಂದ, ತಿಡಿಗೋಳ, ಬೊಮ್ಮನಾಳ, ಜವಳಗೇರಾ, ಜಾಲಿಹಾಳ, ರೌಡಕುಂದ, ಪಗಡದಿನ್ನಿ, ಬಸಾಪುರ, ಕೆ.ಬಸಾಪುರ, ತುರ್ವಿಹಾಳ, ಕಲ್ಮಂಗಿ, ಗುಂಜಳ್ಳಿ, ಉಪ್ಪಲದೊಡ್ಡಿ, ಬಪ್ಪೂರ, ಹೊಗರನಾಳ, ಗುಂಡ, ಕೆ.ಹಂಚಿನಾಳ, ವಿರೂಪಾಪುರ ಸೇರಿದಂತೆ ವಿವಿಧೆಡೆ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು.