ಜಿಲ್ಲೆ

ಶಿವಸೇನೆ, ಎಂಇಎಸ್ ವಿರುದ್ಧ ಹೊನ್ನಾಳಿಯಲ್ಲಿ ಪ್ರತಿಭಟನೆ

ಹೊನ್ನಾಳಿ: ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ವಿರೂಪಗೊಳಿಸಿರುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು ಪಟ್ಟಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿ ಶಿವಸೇನೆ, ಎಂಇಎಸ್ ಪುಂಡರ ಪ್ರತಿಕೃತಿ ದಹಿಸಿದರು.

ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ಕಾರ್ಯಕರ್ತರು ತಾಲೂಕು ಕಚೇರಿಗೆ ತೆರಳಿ ಗ್ರೇಡ್ 2 ತಹಸೀಲ್ದಾರ್ ಸುರೇಶ್ ಅವರಿಗೆ ಮನವಿ ಸಲ್ಲಿಸಿದರು.

ವೇದಿಕೆಯ ಅಧ್ಯಕ್ಷ ಪ್ರದೀಪ್ ಮಾತನಾಡಿ, ಬೆಳಗಾವಿಯಲ್ಲಿ ಅಧಿವೇಶನ ನಡೆಯುವ ಹೊತ್ತಿನಲ್ಲೇ ಮಹಾರಾಷ್ಟ್ರದಲ್ಲಿ ಕರ್ನಾಟಕ ಬಾವುಟಕ್ಕೆ ಬೆಂಕಿ ಹಚ್ಚಲಾಗಿದೆ. ನಂತರ ವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪಗೊಳಿಸಿರುವ ಎಂಇಎಸ್ ಹಾಗೂ ಶಿವಸೇನೆ ಕಾರ್ಯಕರ್ತರು ಪುಂಡಾಟ ಮೆರೆದಿದ್ದಾರೆ. ಕೂಡಲೇ ಅವರನ್ನು ಬಂಧಿಸಿ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.

ಯುವಶಕ್ತಿ ಒಕ್ಕೂಟದ ತಾಲೂಕು ಮುಖಂಡ ಕತ್ತಿಗೆ ನಾಗರಾಜ್ ಮಾತನಾಡಿ, ಎರಡು ರಾಜ್ಯಗಳ ನಡುವೆ ಬಾಂಧವ್ಯಕ್ಕೆ ಧಕ್ಕೆ ಉಂಟು ಮಾಡುತ್ತಿರುವ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಅಣ್ಣಪ್ಪ, ಅಪ್ಪು, ಶಂಕರ, ಬಸವರಾಜು, ಹನುಮಂತ, ರುದ್ರೇಶ್, ಪಾಟೀಲ್, ಮುತ್ತುಸ್ವಾಮಿ, ಪ್ರಕಾಶ್ ಇದ್ದರು.