ಜಿಲ್ಲೆ

ಮಕ್ಕಳ ಪಾಲನೆಗಾಗಿ ಕೇಂದ್ರ: ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಮಾಹಿತಿ

ಕೆ.ಎನ್.ರಾಘವೇಂದ್ರ

ಮಂಡ್ಯ: ಸರ್ಕಾರಿ ಕಚೇರಿಗಳಲ್ಲಿ ಶೇ.50ಕ್ಕಿಂತ ಹೆಚ್ಚಿನ ಮಹಿಳೆಯರು ಕೆಲಸ ನಿರ್ವಹಿಸುತ್ತಿದ್ದಾರೆ. ಅವರ ಮಕ್ಕಳ ಲಾಲನೆ ಪಾಲನೆಗೂ ಹೆಚ್ಚು ಒತ್ತು ನೀಡಬೇಕಾಗಿರುವುದರಿಂದ ಶಿಶು ಪಾಲನಾ ಕೇಂದ್ರ ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ತಿಳಿಸಿದರು.

ನಗರದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಶಿಶು ಪಾಲನಾ ಕೇಂದ್ರ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಸರ್ಕಾರದ ಆದೇಶದಂತೆ ಮಹಿಳೆಯರಿಗೆ ಆರು ತಿಂಗಳ ಮಾತೃತ್ವ ರಜೆ ಸಿಗುತ್ತದೆ. ತದನಂತರ ಒಂದು ವರ್ಷದಿಂದ ಒಂದೂವರೆ ವರ್ಷದವರೆಗೆ ಮಕ್ಕಳ ನೋಡಿಕೊಳ್ಳುವ ಜವಾಬ್ದಾರಿ ತಾಯಂದಿರ ಮೇಲಿರುತ್ತದೆ. ಸರ್ಕಾರಿ ಕಚೇರಿಗಳಲ್ಲಿ ಶಿಶು ಪಾಲನಾ ಕೇಂದ್ರ ತೆರೆಯುವುದರಿಂದ ಮಹಿಳಾ ಉದ್ಯೋಗಿಗಳಿಗೆ ಉಪಯುಕ್ತವಾಗುತ್ತದೆ ಎಂದರು.

ಸರ್ಕಾರ ಮತ್ತು ಮಹಿಳಾ ಆಯೋಗದ ನಿರ್ದೇಶನದಂತೆ ಸ್ಥಳಾವಕಾಶ ಇದ್ದರೆ ಶಿಶು ಪಾಲನೆ ಕೇಂದ್ರದ ವ್ಯವಸ್ಥೆ ಮಾಡಬಹುದಾಗಿದೆ. ಸರ್ಕಾರಕ್ಕೆ ಯಾವುದೇ ವೆಚ್ಚ ಬಾರದಂತೆ ದಾನಿಗಳು ಹಾಗೂ ಬ್ಯಾಂಕ್ ಆಫ್ ಬರೋಡದ ನೆರವಿನಿಂದ ಈ ಶಿಶು ಪಾಲನಾ ಕೇಂದ್ರವನ್ನು ತೆರೆಯಲಾಗಿದೆ. ರೈತರಿಗೆ ಮತ್ತು ಬಡ ಜನರಿಗೆ ಕಂದಾಯ ಇಲಾಖೆ ಹಲವಾರು ಯೋಜನೆಗಳನ್ನು ಒದಗಿಸುವ ಸಂಪರ್ಕ ಸೇತುವೆಯಾಗಿ ಕೆಲಸ ನಿರ್ವಹಿಸುತ್ತದೆ. ಕಂದಾಯ ಇಲಾಖೆಯ ಎಲ್ಲ ಸಿಬ್ಬಂದಿಗಳು ಕೆಲಸ ಸಮನ್ವಯವಾಗಿ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ರೈತರು ಮತ್ತು ಸಾರ್ವಜನಿಕರಿಗೆ ತಹಸೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗಳ ಕಚೇರಿಗಳಲ್ಲಿ ಕೃಷಿ ಹಾಗೂ ಕೃಷಿ ಭೂಮಿಗೆ ಸಂಬಂಧಿಸಿದ ಅನೇಕ ಕೆಲಸಗಳಿರುತ್ತದೆ. ಕೆಲಸಗಳಿಗೆ ಸಂಬಂಧಿಸಿದಂತೆ ಯಾವ ಯಾವ ದಾಖಲೆಗಳು ಬೇಕು, ಖಾತೆ, ಆರ್‌ಟಿಸಿ, ಎಸಿ ಕೋರ್ಟ್‌ನಲ್ಲಿ ಅಫೀಲು ಹಾಕಲು ಬೇಕಿರುವ ದಾಖಲೆ ಕುರಿತು ಕನ್ನಡದಲ್ಲಿ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಕಂದಾಯ ಸಲಹೆ -1 ಖಾತೆದಾರರ ಕೈಪಿಡಿಯನ್ನು ಹೊರತರಲಾಗಿದೆ ಎಂದರು.

ಉಪವಿಭಾಗಾಧಿಕಾರಿ ಎಚ್.ಎಸ್.ಕೀರ್ತನಾ ಮಾತನಾಡಿ, ಮಂಡ್ಯ ಎಸಿ ನ್ಯಾಯಾಲಯದಲ್ಲಿ 5 ಸಾವಿರಕ್ಕೂ ಹೆಚ್ಚು ಪ್ರಕರಣಗಳಿವೆ. ಪರಿಶೀಲಿಸಿದಾಗ ಕೆಲವು ಪ್ರಕರಣಗಳನ್ನು ತಾಲೂಕು ಮಟ್ಟದಲ್ಲೇ ಬಗೆಹರಿಸಿಕೊಳ್ಳಬಹುದು. ಮಾಹಿತಿಯ ಕೊರತೆಯಿಂದ ಉಪವಿಭಾಗಾಧಿಕಾರಿಗಳ ಕಚೇರಿಗೆ ಜನರು ಅಲೆದಾಟ ಮಾಡಿ ಹಣ ಮತ್ತು ಸಮಯ ವ್ಯರ್ಥ ಮಾಡಿಕೊಳ್ಳುತ್ತಾರೆ. ಇದರಿಂದ ಮಧ್ಯಮ ವರ್ಗದ ರೈತರಿಗೆ ತೊಂದರೆ ಆಗುತ್ತದೆ. ಅದನ್ನು ತಡೆಯಲು ಕಂದಾಯ ಸಲಹೆ ಭಾಗ-1 ಖಾತೆದಾರರ ಕೈಪಿಡಿ ಎಂಬ ಒಂದು ಸಣ್ಣ ಹೆಜ್ಜೆ ಇಡಲಾಗಿದೆ. ಇದರಿಂದ ರೈತರಿಗೆ ಬೇಕಾಗುವ ಸಾಮಾನ್ಯ ಮಾಹಿತಿಯನ್ನು ನೀಡಲಾಗಿದೆ. ಈ ಪುಸ್ತಕ ತಹಸೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಲಭ್ಯವಿರುತ್ತದೆ. ಇದರ ಸದುಪಯೋಗ ಮಾಡಿಕೊಳ್ಳಬಹುದು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸೀಫ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಪಾಂಡವಪುರ ಉಪವಿಭಾಗಾಧಿಕಾರಿ ನೋಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಮ್ ಶಾ, ಮಂಡ್ಯ ತಹಸೀಲ್ದಾರ್ ವಿಜಯ್‌ಕುಮಾರ್ ಇತರರಿದ್ದರು.