ಜಿಲ್ಲೆ

ಶಿರ್ವ ಹಿಂದೂ ಪ್ರೌಢಶಾಲೆಗೆ 2.25 ಲಕ್ಷ ರೂ. ಮೌಲ್ಯದ ಶೈಕ್ಷಣಿಕ ಪರಿಕರ ಕೊಡುಗೆ

ಗೋಪಾಲಕೃಷ್ಣ ಪಾದೂರ್

ಉಡುಪಿ: ಶಿರ್ವದ ಹಿಂದೂ ಪ್ರೌಢ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವ 237 ಮಂದಿ ವಿದ್ಯಾರ್ಥಿಗಳಿಗೆ ಅದಾನಿ ಫೌಂಡೇಶನ್​ ವತಿಯಿಂದ ವಿಶೇಷ ಕೊಡುಗೆಯಾಗಿ ರೂ. 2.25 ಲಕ್ಷ ಮೌಲ್ಯದ ಕೊಡೆ, ಸ್ಕೂಲ್​ ಬ್ಯಾಗ್​, ನೋಟ್​ ಪುಸ್ತಕ ಮತ್ತು ಇತರ ಕಲಿಕಾ ಸಾಮಾಗ್ರಿಗಳನ್ನು ಗುರುವಾರ ಶಾಲೆಯಲ್ಲಿ ವಿತರಿಸಲಾಯಿತು.

ಶಿರ್ವ ಗ್ರಾಮ ಪಂಚಾಯಿತಿ ಅಧ್ಯಕ್ಷ ರತನ್​ ಶೆಟ್ಟಿ, ಮುಂಬೈ ಉದ್ಯಮಿ ಶಿರ್ವದ ಉದಯ್​ ಆರ್​. ಹೆಗ್ಡೆ ಮುಖ್ಯ ಅತಿಥಿಗಳಾಗಿದ್ದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಚ್ಚಿದಾನಂದ ಹೆಗ್ಡೆ ಶುಭ ಹಾರೈಸಿದರು. ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಪ್ರೊ. ವೈ. ಭಾಸ್ಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಶಾಲಾ ಮುಖ್ಯ ಶಿಕ್ಷಕಿ ವಸಂತಿ ಬಾಯಿ ಪ್ರಾಸ್ತಾವಿಕ ಮಾತುಗಳನ್ನಾಡಿ ಹಿಂದೂ ಪ್ರೌಢಶಾಲೆಯಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಒದಗಿಸಲಾಗುತ್ತಿರುವ ಉತ್ತಮ ಶಿಕ್ಷಣ, ಪಲಿತಾಂಶವನ್ನು ಪರಿಗಣಿಸಿ ಆಡಳಿತ ಮಂಡಳಿಯ ಮನವಿಯಂತೆ ಅದಾನಿ ಫೌಂಡೇಶನ್​ನವರು ಈ ವಿಶೇಷ ಕೊಡುಗೆ ಮಂಜೂರು ಮಾಡಿದ್ದಾರೆ ಎಂದು ಹೇಳಿದರು

ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಭಾಸ್ಕರ ಎ. ಸ್ವಾಗತಿಸಿ, ಶಿಕ್ಷಕಿಯರಾದ ವೀಣಾ ವಂದಿಸಿ, ಸುಪ್ರೀತಾ ಕಾರ್ಯಕ್ರಮ ನಿರೂಪಿಸಿದರು.