ಜಿಲ್ಲೆ

ಶಿರೂರು ಗುಡ್ಡ ಕುಸಿತ, ಜಗನ್ನಾಥ, ಲೋಕೇಶ ಶವ ಹೊರತೆಗೆಯಲು ಮುಂದಾಗಿ

ಕುಮಟಾ: ಶಿರೂರು ಗುಡ್ಡ ಕುಸಿತದ ಘಟನೆಯಲ್ಲಿ ನಾಪತ್ತೆಯಾಗಿರುವ ಜಗನ್ನಾಥ ನಾಯ್ಕ ಹಾಗೂ ಲೋಕೇಶ ನಾಯ್ಕ ಶವ ಹೊರತೆಗೆಯಬೇಕು ಎಂದು ಇಲ್ಲಿನ ಯುವ ನಾಮಧಾರಿ ಸಂಘಟನೆಯ ವತಿಯಿಂದ ಮುಖ್ಯಮಂತ್ರಿಗೆ ಬರೆದ ಮನವಿಯನ್ನು ಶುಕ್ರವಾರ ಗ್ರೇಡ್-2 ತಹಸೀಲ್ದಾರ್ ಸತೀಶ ಗೌಡ ಅವರ ಮೂಲಕ ಸಲ್ಲಿಸಲಾಯಿತು.

11 ಜನರ ಪ್ರಾಣಕ್ಕೆರವಾದ ಗುಡ್ಡ ಕುಸಿತದ ದುರಂತದಲ್ಲಿ ಪ್ರಾಣ ಕಳೆದುಕೊಂಡವರಲ್ಲಿ ಕೇರಳದ ಲಾರಿ ಚಾಲಕನ ಶವ ಘಟನೆ ನಡೆದು 70 ದಿನಗಳ ನಂತರ ಹೊರತೆಗೆಯಲಾಗಿದೆ. ಇದೇ ರೀತಿ ಪರಿಶ್ರಮ ಹಾಗೂ ಸಮಯ ಪ್ರಜ್ಞೆಯಿಂದ ಜಗನ್ನಾಥ ಮತ್ತು ಲೋಕೇಶ ಅವರ ಶವವನ್ನೂ ಹೊರತೆಗೆಯುವ ಕೆಲಸವಾಗಬೇಕು ಎಂದು ತಿಳಿಸಿದ್ದಾರೆ.

ಈಗಾಗಲೇ ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಜಝುರಿತವಾಗಿರುವ ಜಗನ್ನಾಥ ನಾಯ್ಕ ಮತ್ತು ಲೋಕೇಶ ನಾಯ್ಕ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ಮತ್ತು ಮಾನವೀಯ ನೆರವು ಒದಗಿಸಬೇಕು. ಘಟನೆಗೆ ಕಾರಣವಾದ ಅವೈಜ್ಞಾನಿಕ ಕಾಮಗಾರಿ ನಡೆಸಿದ ಐಆರ್​ಬಿ ಮೇಲೆ ತನಿಖೆ ನಡೆಸಬೇಕು. ಈವರೆಗೆ ಸರ್ಕಾರ ಮಾಡಿರುವ ನಿರ್ಲಕ್ಷ್ಯದಿಂದಾಗಿ ಬಾಧಿತ ಕುಟುಂಬಗಳು ಹಾಗೂ ಸಮುದಾಯದ ಜನರಲ್ಲಿ ಅತೀವ ಬೇಸರ ಹಾಗೂ ಅಸಮಾಧಾನ ಉಂಟಾಗಿದೆ. ಜಗನ್ನಾಥ ನಾಯ್ಕ ಮತ್ತು ಲೋಕೇಶ ನಾಯ್ಕ ಅವರ ಶವ ಹೊರತೆಗೆದು ಅಂತಿಮ ವಿಧಿವಿಧಾನ ನೆರವೇರಿಸಲು ಸರ್ಕಾರದ ತಕ್ಷಣದ ಕ್ರಮದ ಅಗತ್ಯವಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಅಧ್ಯಕ್ಷ ರಾಜೇಶ ನಾಯ್ಕ, ದಿವಾಕರ ನಾಯ್ಕ, ರಾಜು ನಾಯ್ಕ ಮಾಸ್ತಿಹಳ್ಳ, ಅಣ್ಣಪ್ಪ ನಾಯ್ಕ, ಸಂತೋಷ ನಾಯ್ಕ ದೇವರಹಕ್ಕಲ, ದತ್ತು ನಾಯ್ಕ ಹೆಗಡೆ, ಯೋಗೀಶ ನಾಯ್ಕ, ಸಚಿನ ನಾಯ್ಕ, ಪ್ರಮೋದ ನಾಯ್ಕ, ಸಂದೇಶ ನಾಯ್ಕ, ವೈಭವ ನಾಯ್ಕ ಇತರರು ಇದ್ದರು.