ಜಿಲ್ಲೆ

ಅರ್ಜುನ್ ಪತ್ತೆಗೆ ಸುಪ್ರೀಂ ಕೋರ್ಟ್ ಮೊರೆ ಹೋದ ಕೇರಳಿಗರು

Uttara Kannada - Subash Hegde

ಕಾರವಾರ: ಶಿರೂರು ಗುಡ್ಡ ಕುಸಿತ ದುರಂತದಲ್ಲಿ ನಾಪತ್ತೆಯಾದ ನಾಟಾ ತುಂಬಿದ ಬೆಂಜ್ ಲಾರಿ ಚಾಲಕ ಕೇರಳದ ಅರ್ಜುನ್ ಪತ್ತೆಗೆ ಸುಪ್ರೀಂ ಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಯಿತು.

ಕಲ್ಲಿಕೋಟೆಯ ಅರ್ಜುನ್ ಜೊಯಿಡಾ ರಾಮನಗರದಿಂದ ಕೇರಳಕ್ಕೆ ನಾಟಾ ಕೊಂಡೊಯ್ಯುತ್ತಿದ್ದರು. ಶಿರೂರು ಲಕ್ಷ್ಮಣ ನಾಯ್ಕ ಅಂಗಡಿಯ ಎದುರು ತಿಂಡಿಗಾಗಿ ನಿಲ್ಲಿಸಿದ್ದ ಸಂದರ್ಭದಲ್ಲಿ ಗುಡ್ಡ ಕುಸಿತ ಸಂಭವಿಸಿ ಅವರು ನಾಪತ್ತೆಯಾಗಿದ್ದರು.

ಕರ್ನಾಟಕ ಸರ್ಕಾರ ದಿನದ 24 ಗಂಟೆ ಕಾರ್ಯ ನಿರ್ವಹಿಸುತ್ತಿಲ್ಲ. ಅವರು ಟ್ರಕ್ ಒಳಗೆ ಜೀವಂತ ಇರುವ ಸಾಧ್ಯತೆ ಇದೆ. ಅವರ ಮೊಬೈಲ್ ಜು.19 ರಂದು ರಿಂಗ್ ಆಗಿತ್ತು ಎಂದು ಮನೆಯವರು ಹೇಳುತ್ತಿದ್ದಾರೆ.‌ ಶೀಘ್ರ ಕಾರ್ಯಾಚರಣೆಗೆ ಸೂಚಿಸಬೇಕು ಎಂದು ವಕೀಲ ಕೆ.ಆರ್. ಸುಭಾಷ್ ಚಂದ್ರನ್ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿದ್ದರು.

ಸುಸುಪ್ರೀಂ ಕೋರ್ಟ್ ನ ಪಿ.ಬಿ.ವರಾಲೆ, ವಿಕ್ರಮನಾಥ ಅವರ ಪೀಠವು ವಿಚಾರಣೆ ನಡೆಸಿ ವಿಷಯವನ್ನು ಕರ್ನಾಟಕ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿ, ಅಲ್ಲಿನ ಮುಖ್ಯ ನ್ಯಾಯಮೂರ್ತಿಗಳು ಆದ್ಯತೆಯ ಮೇಲೆ ಅರ್ಜಿಯನ್ನು ವಿಚಾರಣೆ ನಡೆಸಬಹುದು ಎಂದು ಅರ್ಜಿದಾರರಿಗೆ ಸೂಚಿಸಿದ್ದಾರೆ.

ಅರ್ಜುನ್ ಪತ್ತೆಗೆ ಕೇರಳ ಜನ ಪ್ರಾರ್ಥಿಸುತ್ತಿದ್ದಾರೆ. ಮಂಜೇಶ್ವರ ಎಂಎಲ್ ಎಂ.ಕೆ.ಅಶ್ರಫ್, ಕಲ್ಲಿಕೋಟೆ ಎಂಪಿ ಎಂ.ಕೆ. ರಾಘವನ್ ಅಂಕೋಲಾಕ್ಕೆ ಆಗಮಿಸಿದ್ದಾರೆ.

ಕೇರಳದಿಂದ ಯುವಕರ ತಂಡವೊಂದು ರಕ್ಷಣಾ ಕಾರ್ಯಾಚರಣೆಗೆ ಆಗಮಿಸಿದೆ. ಅಲ್ಲಿನ‌ ಪೊಲೀಸ್ ಅಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳು ಆಗಮಿಸಿದ್ದಾರೆ. ಕೇರಳ ಮಾಧ್ಯಮಗಳು ಕರ್ನಾಟಕ ಸರ್ಕಾರದ ವಿರುದ್ಧ ನಿರಂತರ‌ ಸುದ್ದಿ ಪ್ರಕಟಿಸುತ್ತಿವೆ.