ಜಿಲ್ಲೆ

ಶಿರೂರು ಗುಡ್ಡ ಕುಸಿತ: ಗಂಗಾವಳಿಯಾಳದ ಶೋಧ ಕಾರ್ಯಾಚರಣೆ ತಾತ್ಕಾಲಿಕ ಸ್ಥಗಿತ

ಕಾರವಾರ: ದೊಡ್ಡ ಆಲದ ಮರ, ಕಲ್ಲು, ಮಣ್ಣು, ಮನೆಯ ಸಾಮಗ್ರಿಗಳು, ಮರದ ದಿಮ್ಮಿಗಳು ಸೇರಿ ಗಂಗಾವಳಿ ನದಿಯಲ್ಲಿ ಸೇರಿ ದ್ವೀಪವೇ ಸೃಷ್ಟಿಯಾಗಿದ್ದು, ಅದರಡಿ ಲಾರಿ ಹಾಗೂ ನಾಪತ್ತೆಯಾದವರ ದೇಹಗಳು ಸಿಲುಕಿರುವ ಸಾಧ್ಯತೆ ಇದ್ದು, ಅದನ್ನು ಹುಡುಕುವುದು ಹೇಗೆ ಎಂಬುದು ಜಿಲ್ಲಾಡಳಿತಕ್ಕೆ ದಿಕ್ಕು ತೋಚದಂತಾಗಿದೆ. ಇದರಿಂದ ಭಾನುವಾರ ಗಂಗಾವಳಿ ನದಿಯಲ್ಲಿನ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಯಿತು.
ಜು.16 ರಂದು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಶಿರೂರಿನಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ಅದರಲ್ಲಿ 11 ಜನ ನಾಪತ್ತೆಯಾಗಿರುವ ಬಗ್ಗೆ ಇದುವರೆಗೆ ದೂರುಗಳು ದಾಖಲಾಗಿವೆ. ಇದುವರೆಗ 8 ಜನರ ಮೃತ ದೇಹಗಳು ಸಿಕ್ಕಿವೆ. ಕುಮಟಾ ಮೂಲದ ಹಾಲಿ ಶಿರೂರು ನಿವಾಸಿ ಜಗನ್ನಾಥ ನಾಯ್ಕ, ಗಂಗೆಕೊಳ್ಳ ನಿವಾಸಿ ಲೋಕೇಶ ನಾಯ್ಕ ಹಾಗೂ ಕೇರಳ ಮೂಲದ ಟ್ರಕ್ ಚಾಲಕ ಅರ್ಜುನ್ ಇದುವರೆಗೂ ನಾಪತ್ತೆಯಾಗಿದ್ದಾರೆ. 3 ಟ್ಯಾಂಕರ್, 1 ಲಾರಿ ನಾಪತ್ತೆಯಾಗಿದ್ದವು. 2 ಗ್ಯಾಸ್ ಟ್ಯಾಂಕರ್‌ಗಳು ಸುರಕ್ಷಿತವಾಗಿ ಪತ್ತೆಯಾಗಿವೆ. 1 ಲಾರಿ, ಹಾಗೂ ಒಂದು ಗ್ಯಾಸ್ ಟ್ಯಾಂಕರ್‌ನ ಬಾಡಿ ಇದುವರೆಗೂ ನಾಪತ್ತೆಯಾಗಿದೆ.
ಅವುಗಳಿಗಾಗಿ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಭಾರತೀಯ ಸೇನೆಯ ಮರಾಠಾ ಇನ್‌ಫೆಂಟ್ರರಿ ರೆಜಿಮೆಂಟ್, ಪುಣೆ ಮಿಲಿಟರಿ ಇಂಜಿನಿಯರಿಂಗ್ ಕಾಲೇಜ್‌ನ ತಜ್ಞರು, ಭಾರತೀಯ ನೌಕಾಪಡೆಯ ಮುಳುಗು ತಜ್ಞರು, ಭಾರತೀಯ ಸೇನೆಯ ನಿವೃತ್ತ ಮೇಜರ್ ಜನರಲ್ ಇಂದ್ರಬಾಲನ್ ಅವರ ನೇತೃತ್ವದ ಸುಧಾರಿತ ಡ್ರೋನ್ ತಂತ್ರಜ್ಞಾನದ ಖಾಸಗಿ ಕಂಪನಿ ಈಗ ಮುಳುಗ ತಜ್ಞ ಈಶ್ವರ ಮಲ್ಪೆ ಅವರ ತಂಡದ ಮೂಲಕ ಶೋಧ ಕಾರ್ಯಾಚರಣೆಯನ್ನು 13 ದಿನಗಳಿಂದ ನಿರಂತರವಾಗಿ ನಡೆಸಲಾಗಿದೆ. ಕೋಸ್ಟ್ ಗಾರ್ಡ್ ಹೆಲಿಕಾಫ್ಟರ್ ನದಿಯಲ್ಲಿ ದೇಹಗಳಿಗಾಗಿ ಹುಡುಕಾಟ ನಡೆಸಿದೆ. ಲಾಂಗ್ ಆರ್ಮ್ ಭೂಮರ್‌ನ್ನು ಗೋಕ್‌ಕ್‌ದಿಂದ ತರಿಸಿ ನದಿಯ ದಡವನ್ನು ತೆರವು ಮಾಡಲಾಗಿದೆ.
ಭೂಮಿಯಡಿ ಲೋಹ ಗುರುತಿಬಲ್ಲ ಎನ್‌ಐಟಿಕೆಯ ರಡಾರ್, ಇಸ್ರೋದ ಸೆಟಲೈಟ್ ಇಮೇಜ್, ಥರ್ಮಲ್ ಇಮೇಜ್, ಸೋನಾರ್ ತಂತ್ರಜ್ಞಾನ ಹಾಗೂ ಸುಧಾರಿತ ಡ್ರೋನ್ ಮೂಲಕ ನೀರು, ಭೂಮಿಯಾಳದ ವಸ್ತುಗಳ ಶೋಧ ನಡೆಸಲಾಗಿದೆ. ನಾಪತ್ತೆಯಾದ ಎಲ್ಲವೂ ನೀರಿನಡಿಯೇ ಇರುವ ಸಾಧ್ಯತೆ ಇರುವುದರಿಂದ ಕಳೆದ ಐದು ದಿನಗಳಿಂದ ನದಿಯಲ್ಲಿ ಕಾರ್ಯಾಚರಣೆ ಹೆಚ್ಚಿಸಲಾಗಿತ್ತು. ಆದರೆ, ನದಿಯ ಹರಿವು ವೇಗವಾಗಿದೆ. ರಾಡಿ ಸೇರಿದೆ ಅಲ್ಲದೇ ಆಗಾಗ ಮಳೆ ಬೀಳುತ್ತಿರುವುದರಿಂದ ನದಿಯಲ್ಲಿ ಮಣ್ಣು ತೆಗೆಯಲು ಸಾಧ್ಯವಾಗುತ್ತಿಲ್ಲ. ಇದರಿಂದ ತಾತ್ಕಾಲಿಕವಾಗಿ ಭಾನುವಾರ ಕಾರ್ಯಾಚರಣೆ ಮೊಟಕು ಮಾಡಲಾಗಿದೆ.

ಕಾರ್ಯಾಚರಣೆ ಕಷ್ಟ

ಸುಧಾರಿತ ಡ್ರೋನ್ ತಂತ್ರಜ್ಞಾನದ ಮೂಲಕ ಗುರುತಿಸಲಾದ ಲಾರಿ ಇರುವ ನಾಲ್ಕು ಸ್ಥಳಗಳಲ್ಲಿ ಒಟ್ಟು ೧೪ ಬಾರಿ ಮುಳುಗಿ ನೋಡಿದ್ದೇನೆ. ನೀರಿನ ಸೆಳವು ಜೋರಾಗಿದ್ದು, ಹಗ್ಗ ಬಿಟ್ಟರೆ ತೇಲಿ ಹೋಗುತ್ತೇವೆ. ನದಿಯಾಳದಲ್ಲಿ ಕಣ್ಣು ಬಿಟ್ಟರೂ ನಮಗೆ ಏನೂ ಕಾಣಿಸದು. ಸ್ಪರ್ಷ್ದ ಮೂಲಕ ಆಲದ ಮರ, ಕಲ್ಲುಗಳು, ಮನೆಯ ಶೀಟ್‌ಗಳು ಇರುವುದು ಕಂಡುಬಂದಿದೆ. ಆದರೆ, ಅವುಗಳನ್ನು ತೆರವು ಮಾಡುವುದು ಕಷ್ಟವಾಗಿದೆ. ಲಾರಿಯ ಯಾವುದೇ ಭಾಗಗಳು ಇರುವುದು ನನ್ನ ಅನುಭವಕ್ಕೆ ಬಂದಿಲ್ಲ. ಮಣ್ಣಿನ ನಡುವೆ ಇರುವ ಸಾಧ್ಯತೆ ಇದೆ. ಆದರೆ, ಕಾರ್ಯಾಚರಣೆ ನಡೆಸುವುದು ಕಷ್ಟವಾಗುತ್ತಿದೆ ಎಂದು ಖ್ಯಾತ ಮುಳುಗು ತಜ್ಞ ಈಶ್ವರ ಮಲ್ಪೆ ತಿಳಿಸಿದ್ದಾರೆ. ಅವರು ಎರಡು ದಿನ ನಿರಂತರವಾಗಿ ಐದಾರು ಗಂಟೆಗೂ ಅಽಕ ಕಾಲ ತಮ್ಮ ಜೀವದ ಹಂಗು ತೊರೆದು ಕಾರ್ಯಾಚರಣೆ ನಡೆಸಿದರು. ಒಮ್ಮೆ ಹಗ್ಗ ಬಿಟ್ಟು ತೇಲಿ ಹೋದರು. ತಂಡದ ಒಬ್ಬ ವ್ಯಕ್ತಿ ಗಾಯಗೊಂಡರು. ಆದರೂ ಅವರು ಕಾರ್ಯಾಚರಣೆ ನಡೆಸಿದರು.

ನಾಪತ್ತೆಯಾದವರಿಗೂ ಪರಿಹಾರ

ನಾಪತ್ತೆಯಾದ ವ್ಯಕ್ತಿಗಳ ಕುಟುಂಬದ ಸದಸ್ಯರಿಂದ ಬಾಂಡ್ ಬರೆಸಿಕೊಂಡು ಅವರ ಕುಟುಂಬಗಳಿಗೂ ತಲಾ 5 ಲಕ್ಷ ರೂ. ಪರಿಹಾರ ವಿತರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ತಿಳಿಸಿದ್ದಾರೆ. ಭಾನುವಾರ ಕಾರ್ಯಾಚರಣೆಯ ಸ್ಥಳಕ್ಕೆ ಆಗಮಿಸಿದ ಅವರು ಜಿಲ್ಲಾಡಳಿತದ ಜತೆ ಚರ್ಚಿಸಿ, ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು. ನಾಪತ್ತೆಯಾದ ಹಾಗೂ ಮೃತರ ಕುಟುಂಬಗಳ ಜತೆ ನಾವಿದ್ದೇವೆ. ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುತ್ತೇವೆ. ಅವರಿಗೆ ಅಗತ್ಯ ನೆರವು ನೀಡಲಿದ್ದೇವೆ ಎಂದರು.
ಸಾಧ್ಯವಿದ್ದ ಎಲ್ಲ ಪ್ರಯತ್ನಗಳನ್ನು ನಾವು ಮಾಡಿದ್ದೇವೆ. ನೀರಿನಲ್ಲಿ ಇನ್ನೇನೂ ಮಾಡಲು ಸಾಧ್ಯವಾಗುತ್ತಿಲ್ಲ. ಮುಂದೆ ಯಾವ ರೀತಿ ಕಾರ್ಯಾಚರಿಸಬಹುದು ಎಂಬುದನ್ನು ತಜ್ಞರ ಜತೆ ಚರ್ಚಿಸಿ ಮುಂದಡಿ ಇಡಲಾಗುವುದು. ಕಾರ್ಯಾಚರಣೆಯನ್ನು ಇಂದು ತಾತ್ಕಾಲಿಕವಾಗಿ ಸ್ಥಗಿತ ಮಾಡಿದ್ದೇ ಹೊರತು, ಕಾಯಮಾಗಿ ಅಲ್ಲ. ಕಾರ್ಯಾಚರಣೆ ಮುಂದುವರಿಯಲಿದೆ ಎಂದರು.

  • ಸಾಧ್ಯತೆಗಳು
  • *ಸಣ್ಣ ಬಾರ್ಜ್ ತಂದು ನಿಲ್ಲಿಸಿ, ಅದರ ಮೂಲಕ ನಿಧಾನವಾಗಿ ನದಿಯಾಳದ ಮಣ್ಣು ಗೆಯಬೇಕು
  • *ಫ್ಲೋಟಿಂಗ್ ಜಟ್ಟಿಯನ್ನು ಹಾಕಿ, ಅದರ ಮೇಲೆ ಮಣ್ಣು ಬಗೆಯುವ ಯಂತ್ರ ಇಳಿಸಬೇಕು.
  • *ನೀರು ತಿಳಿಯಾಗುವವರೆಗೆ ಕಾದು, ನಂತರ ಮುಳುಗು ತಜ್ಞರ ಮೂಲಕ ಕಾರ್ಯಾಚರಣೆ ನಡೆಸಬೇಕು.
ಅರ್ಜುನ್ ನನ್ನ ಕ್ಷೇತ್ರದ ಮತದಾರನಲ್ಲ. ನನ್ನ ಸಂಬಂಽಯಲ್ಲ. ಆದರೆ, ಮಾನವೀಯತೆಯ ದೃಷ್ಟಿಯಿಂದ ಕಳೆದ 10 ದಿನಗಳಿಂದ ಇಲ್ಲಿದ್ದು, ಅರ್ಜುನ್ ಗಾಗಿ ನಡೆದ ಹುಡುಕಾಟದ ಬಗ್ಗೆ ಪರಿಶೀಲಿಸಿದ್ದೇನೆ. ಉತ್ತರ ಕನ್ನಡ ಜಿಲ್ಲಾಡಳಿತ, ಶಾಸಕ ಸತೀಶ ಸೈಲ್ ಸಾಧ್ಯವಿದ್ದ ಎಲ್ಲ ಪ್ರಯತ್ನಗಳನ್ನು ನಡೆಸಿದೆ. ಆದರೆ, ನಮ್ಮ ಪ್ರಯತ್ನ ಸೋಲುತ್ತಿದೆ. ಬಹಳ ಬೇಸರವಾಗುತ್ತಿದೆ.ಎಂ.ಕೆ.ಅಶ್ರಫ್ಕೇರಳ, ಮಂಜೇಶ್ವರ ಶಾಸಕ
ಘಟನೆ ನಡೆದ ದಿನದಿಂದ ಹಗಲು, ರಾತ್ರಿ ಇಲ್ಲೇ ಇದ್ದು, ಕೆಲಸ ಮಾಡಿದ್ದೇನೆ. ಸಾಧ್ಯವಾದ ಎಲ್ಲ ತಂತ್ರಜ್ಞಾನಗಳನ್ನು ಬಳಸಿ ನಾವು ಕಾರ್ಯಾಚರಿಸಿದ್ದೇವೆ. ಆದರೆ, ಗಂಗಾವಳಿ ನದಿಯ ಹರಿವು ಜೋರಾಗಿರುವುದರಿಂದ ಕಾರ್ಯಾಚರಣೆ ಕಷ್ಟವಾಗುತ್ತಿದೆ. ಕಾರ್ಯಾಚರಣೆ ಕೈಬಿಡುವುದಿಲ್ಲ. ಇನ್ನೂ ಮೂವರು ಪತ್ತೆಯಾಗದ ಬಗ್ಗೆ ಬೇಸರವಿದೆ. ಅವರ ಕುಟುಂಬಗಳ ಜತೆ ನಾವಿದ್ದೇವೆ.ಸತೀಶ ಸೈಲ್ಕಾರವಾರ, ಅಂಕೋಲಾ ಶಾಸಕ