ಜಿಲ್ಲೆ

ಕಾರು ಡಿಕ್ಕಿಯಾಗಿ ಶಿರೂರು ಟೋಲ್‌ಗೇಟ್ ಸಿಬ್ಬಂದಿ ಸಾವು

Dakshina Kannada

ಬೈಂದೂರು: ಶಿರೂರು ಟೋಲ್ ಗೇಟ್ ಬಳಿ ಸೋಮವಾರ ಮುಂಜಾನೆ ಕಾರು ಡಿಕ್ಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಟೋಲ್ ಸಿಬ್ಬಂದಿ ದಾರುಣವಾಗಿ ಸಾವುಗೀಡಾಗಿದ್ದಾರೆ.

ನಸುಕಿನ 2 ಗಂಟೆ ವೇಳೆ ವೇಗವಾಗಿ ಬಂದ ಗೋವಾ ನೋಂದಣಿಯ ಕಾರು ಟೋಲ್ ಗೇಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ರಾಘವೇಂದ್ರ ಮೇಸ್ತ (44) ಗಂಭೀರ ಗಾಯಗೊಂಡಿದ್ದು, ಡಿವೈಡರ್ ಹಾಗೂ ಕಾರಿನ ಮಧ್ಯೆ ಸಿಲುಕಿದ್ದ ಅವರು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಇಬ್ಬರು ಬ್ರಹ್ಮಾವರ ಮೂಲದವರಾಗಿದ್ದು, ಅವರೂ ಗಂಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸ್ಥಳೀಯರ ಅಕ್ರೋಶ: ಘಟನೆ ಬಳಿಕ ಟೋಲ್ ಗೇಟ್ ನಿರ್ಲಕ್ಷೃ ಧೋರಣೆಗೆ ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ರಾತ್ರಿ ಘಟನೆ ನಡೆದರೂ ಬೆಳಗ್ಗೆ ತನಕ ಸಂಬಂಧಿಸಿದ ಅಧಿಕಾರಿಗಳು ಬಂದಿಲ್ಲ. ಟೋಲ್ ಮ್ಯಾನೇಜರ್ ಕರೆ ಸ್ವೀಕರಿಸಿಲ್ಲ. ಸೂಕ್ತ ಪರಿಹಾರ ನೀಡಿ ಕ್ರಮಕೈಗೊಳ್ಳದಿದ್ದರೆ ಟೋಲ್ ಗೇಟ್ ಎದುರು ಶವ ಇಟ್ಟು ಪ್ರತಿಭಟಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ಬಳಿಕ ಸ್ಥಳಕ್ಕಾಗಮಿಸಿದ ಟೋಲ್ ಅಧಿಕಾರಿಗಳು, ಆರಕ್ಷಕರ ಸಮ್ಮುಖದಲ್ಲಿ ಸಾರ್ವಜನಿಕರು ಹಾಗೂ ಸ್ಥಳೀಯ ಮುಖಂಡರ ಜತೆ ಮಾತುಕತೆ ನಡೆಸಿದರು. ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಹಾಗೂ ಅವರ ಪತ್ನಿಗೆ ಉದ್ಯೋಗ ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಬೈಂದೂರು ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.