ಜಿಲ್ಲೆ

ಬಾಲ ಸನ್ಯಾಸ ಅರ್ಜಿ ವಿಚಾರಣೆ ಪೂರ್ಣ, ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ಬೆಂಗಳೂರು: ಉಡುಪಿಯ ಶೀರೂರು ಮಠದ ಪೀಠಾಧಿಪತಿಯಾಗಿ ಅಪ್ರಾಪ್ತ ವಯಸ್ಸಿನವರನ್ನು ನೇಮಕ ಮಾಡಿರುವ ಕ್ರಮ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್, ತೀರ್ಪು ಕಾಯ್ದಿರಿಸಿದೆ.

ಶಿರೂರು ಮಠ ಭಕ್ತ ಸಮಿತಿಯ ಕಾರ್ಯದರ್ಶಿ ಪಿ.ಲಾತವ್ಯ ಆಚಾರ್ಯ ಸೇರಿ ನಾಲ್ವರು ಸಲ್ಲಿಸಿರುವ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠ ಶುಕ್ರವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲರು, ಅಮಿಕಸ್ ಕ್ಯೂರಿ, ಪ್ರತಿವಾದಿಗಳಾದ ಸೋದೆ ವಾದಿರಾಜ ಮಠದ ಪರ ವಕೀಲರು ಹಾಗೂ ಸರ್ಕಾರದ ಪರ ವಕೀಲರು ಪ್ರಕರಣದ ಸಂಬಂಧ ವಾದ ಮಂಡಿಸಿದರು. ಬಾಲ ಸನ್ಯಾಸ, ಪೀಠಾಧಿಪತಿಯಾಗಿ ಅಪ್ರಾಪ್ತರ ನೇಮಕಾತಿಗೆ ಕಾನೂನಿನ ಅವಕಾಶ, ಅಷ್ಟ ಮಠಗಳ ಪರಂಪರೆ ಕುರಿತು ನಾಲ್ಕು ಗಂಟೆಗೂ ಅಧಿಕ ಸಮಯ ವಾದ-ಪ್ರತಿವಾದ ಆಲಿಸಿದ ಪೀಠ ವಿಚಾರಣೆ ಪೂರ್ಣಗೊಳಿಸಿ, ತೀರ್ಪು ಕಾಯ್ದಿರಿಸಿತು.

ಅರ್ಜಿದಾರರ ವಾದ: ಅರ್ಜಿದಾರರ ಪರ ವಕೀಲ ಡಿ.ಆರ್. ರವಿ ಶಂಕರ್ ವಾದ ಮಂಡಿಸಿ, ಅಷ್ಟಮಠಗಳಿಗೆ ಪ್ರತ್ಯೇಕ ಭಕ್ತಪರಂಪರೆ ಇದೆ. ಹಾಲಿ ಪೀಠಾಧಿಪತಿ ಶೀರೂರು ಮಠಕ್ಕೆ ನಡೆದುಕೊಳ್ಳುವವರಲ್ಲ. ಅವರ ತಂದೆ ಸೋದೆ ವಾದಿರಾಜ ಮಠದ ಅನುಯಾಯಿ. ವಾದಿರಾಜ ಮಠ ಶೀರೂರು ಮಠದ ಪೀಠಾಧಿಪತಿ ನೇಮಕ ಮಾಡಿದೆ. ಮೇಲಾಗಿ, ಅಪ್ರಾಪ್ತರ ಮೇಲೆ ವೈರಾಗ್ಯ ಹೇರುವುದಾಗಲಿ, ಪೀಠಾಧಿಪತಿ ಹೊಣೆ ಹೊರಿಸುವುದಾಗಲಿ ಮಾಡಬಾರದು. ಪೀಠಾಧಿಪತಿಯಾಗುವವರಿಗೆ ಆಸ್ತಿ ನಿರ್ವಹಣೆಯ ಹೊಣೆಗಾರಿಕೆ ಇರುತ್ತದೆ. ಆದರೆ, ಕಾನೂನಿನಡಿ ಅಪ್ರಾಪ್ತರು ಆಸ್ತಿ ಹೊಣೆಗಾರಿಕೆ ನಿಭಾಯಿಸುವಂತಿಲ್ಲ. ಅಪ್ರಾಪ್ತರ ಪಾಲಕರು ಮಾತ್ರ ಆಸ್ತಿ ನಿರ್ವಹಣೆ ಮಾಡಬಹುದು. ಆದ್ದರಿಂದ, ಅಪ್ರಾಪ್ತರನ್ನು ಶೀರೂರು ಮಠದ ಪೀಠಾಧಿಪತಿಯಾಗಿ ನೇಮಕ ಮಾಡಿರುವುದು ಕಾನೂನು ಬಾಹಿರ ಕ್ರಮ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಉತ್ತರಾಧಿಕಾರಿ ನೇಮಕ ಅಧಿಕಾರ: ಸೋದೆ ವಾದಿರಾಜ ಮಠದ ಪರ ವಕೀಲರು ವಾದ ಮಂಡಿಸಿ, ಉಡುಪಿಯ ಅಷ್ಟ ಮಠಗಳನ್ನು ದ್ವಂದ್ವ ಮಠಗಳಾಗಿ ನಾಲ್ಕು ಜೊತೆ ಮಾಡಲಾಗಿದೆ. ಅದರಂತೆ ಶೀರೂರು ಹಾಗೂ ಸೋದೆ ದ್ವಂದ್ವ ಮಠಗಳು. ದ್ವಂದ್ವ ಮಠಗಳಲ್ಲಿ ಯಾವುದೇ ಒಂದು ಮಠದ ಪೀಠಾಧಿಪತಿ ಮೃತಪಟ್ಟಾಗ ಅಥವಾ ಪೀಠಾಧಿಪತಿಯಾಗಿ ಮುಂದುವರಿಯಲು ಆಗದಿದ್ದಾಗ, ಉತ್ತರಾಧಿಕಾರಿ ನೇಮ ಅಧಿಕಾರ ಮತ್ತೊಂದು ಮಠದ ಪೀಠಾಧಿಪತಿಗೆ ಇರುತ್ತದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಸಾರ್ವಜನಿಕ ಹಿತಾಸಕ್ತಿ ಅಡಗಿಲ್ಲ

ಮೊದಲನೇ ಅರ್ಜಿದಾರ ಲಾತವ್ಯ ಆಚಾರ್ಯ ಹಾಗೂ ಎರಡನೇ ಅರ್ಜಿದಾರ ಶ್ರೀನಿವಾಸ ಆಚಾರ್ಯ ಶೀರೂರು ಮಠದ ಹಿಂದಿನ ಪೀಠಾಧಿಪತಿಯ ಸಹೋದರರು. ಮೂರನೇ ಅರ್ಜಿದಾರ ಶ್ರೀನಿವಾಸ ಆಚಾರ್ಯರ ಪುತ್ರ, ನಾಲ್ಕನೇ ಅರ್ಜಿದಾರ ಲಾತವ್ಯ ಆಚಾರ್ಯರ ಪುತ್ರ. ಮಠದ ಮೇಲೆ ಹಿಡಿತ ಸಾಧಿಸಲು 2020ರ ಡಿಸೆಂಬರ್‌ನಲ್ಲಿ ಟ್ರಸ್ಟ್ ರಚಿಸಿಕೊಂಡಿದ್ದಾರೆ. ಲಾತವ್ಯ ಆಚಾರ್ಯರ ಮಗನನ್ನು ಪೀಠಾಧಿಪತಿಯಾಗಿ ಮಾಡಬೇಕೆಂದು ನಿರ್ಧರಿಸಿದ್ದರು. ಸಾಧ್ಯವಾಗದಿದ್ದಾಗ ನ್ಯಾಯಾಲಯದ ಮೆಟ್ಟಿಲೇರಿ ಹಿನ್ನಡೆ ಅನುಭವಿಸಿದ ನಂತರ ಈಗ ಪಿಐಎಲ್ ಸಲ್ಲಿಸಿದ್ದಾರೆ. ಈ ಅರ್ಜಿಯಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಅಡಗಿಲ್ಲ ಎಂದು ಸೋದೆ ಮಠದ ಪರ ವಕೀಲರು ನ್ಯಾಯಪೀಠಕ್ಕೆ ವಿವರಿಸಿದರು.

ಲೋಪವಿಲ್ಲವೆಂದ ಅಮಿಕಸ್ ಕ್ಯೂರಿ

ಪ್ರಕರಣದ ಅಮಿಕಸ್ ಕ್ಯೂರಿಯಾಗಿರುವ ಹಿರಿಯ ವಕೀಲ ಎಸ್.ಎಸ್. ನಾಗಾನಂದ ವಾದ ಮಂಡಿಸಿ, ಸಂವಿಧಾನದ ಪರಿಚ್ಛೇಧ 26ರಲ್ಲಿ ಧಾರ್ಮಿಕ ಸ್ವಾತಂತ್ರ್ಯಗಳನ್ನು ನೀಡಲಾಗಿದೆ. ಅದರಲ್ಲಿ ಯಾರೂ ಹಸ್ತಕ್ಷೇಪ ಮಾಡಲಾಗದು. ಶೀರೂರು ಮಠಕ್ಕೆ ಧರ್ಮ ಹಾಗೂ ಸಂಪ್ರದಾಯಗಳ ಪ್ರಕಾರವೇ ಪೀಠಾಧಿಪತಿ ನೇಮಕ ಮಾಡಲಾಗಿದೆ. ಅಪ್ರಾಪ್ತನನ್ನು ಪೀಠಾಧಿಪತಿಯಾಗಿ ನೇಮಕ ಮಾಡಿರುವುದಕ್ಕೆ ಅರ್ಜಿದಾರರು ಆಕ್ಷೇಪಿಸಿದ್ದಾರೆ. ಭಾರತೀಯ ಪ್ರೌಢಾವಸ್ಥೆ ಕಾಯ್ದೆ ಪ್ರಕಾರ 18 ವಯಸ್ಸನ್ನು ನಿಗದಿ ಮಾಡಲಾಗಿದೆ. ಆದರೆ, ಧಾರ್ಮಿಕ ವಿಷಯಗಳಿಗೆ ಬಂದಾಗ 14 ವರ್ಷ ವಯಸ್ಸನ್ನು ಪರಿಗಣಿಸಲಾಗುತ್ತದೆ. ಶಾಸ್ತ್ರಗಳು ಹಾಗೂ ಶ್ಲೋಕಗಳ ಪ್ರಕಾರ 14 ವಯಸ್ಸು ದಾಟಿದವರು ವಿರಕ್ತಿ ನಿರ್ಧಾರ ಕೈಗೊಳ್ಳಬಹುದು. ಬೌದ್ಧರಲ್ಲಿ ಚಿಕ್ಕ ಮಕ್ಕಳಿಗೇ ಸನ್ಯಾಸ ನೀಡಲಾಗುತ್ತದೆ. ಈ ಪ್ರಕರಣದಲ್ಲಿ ಮಠಾಧಿಪತಿಗೆ 17 ವರ್ಷವಾಗಿದೆ. ತಂದೆ ಡಾಕ್ಟರೇಟ್ ಪಡೆದಿದ್ದಾರೆ. ತಾಯಿಯೂ ವಿದ್ಯಾವಂತೆ. ಮಗನೂ ಆಸಕ್ತಿ ಹೊಂದಿದ್ದರಿಂದಲೇ ಸನ್ಯಾಸ ದೀಕ್ಷೆ ನೀಡಲಾಗಿದೆ. ಇದರಲ್ಲಿ ಲೋಪವೇನೂ ಕಂಡುಬರುತ್ತಿಲ್ಲ ಎಂದು ವಿವರಿಸಿದರು.