ಕುಂಬಳೆ: ಕುಂಬಳೆ ಗ್ರಾಮ ಪಂಚಾಯಿತಿಯ ಬಂಬ್ರಾಣ ಹಾಗೂ ಮಂಗಲ್ಪಾಡಿ ಪಂಚಾಯಿತಿಯ ಇಚ್ಚಂಗೋಡು ಪ್ರದೇಶಗಳನ್ನು ಸಂಪರ್ಕಿಸಲು ಶಿರಿಯ ಹೊಳೆಗೆ ಅಡ್ಡವಾಗಿ 30.60 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುವ ರೆಗ್ಯುಲೇಟರ್ ಕಂ ಬ್ರಿಡ್ಜ್‌ನ ಕಾಮಗಾರಿ ಮೊಟಕುಗೊಂಡಿದೆ. ಅರ್ಧಕ್ಕೆ ಸ್ಥಗಿತಗೊಂಡಿದೆ.
ಒಂದು ವರ್ಷದ ಹಿಂದೆ ಕಾಮಗಾರಿ ಆರಂಭಗೊಂಡಿತ್ತು. ಬಂಬ್ರಾಣ ಭಾಗದಲ್ಲಿ ರಸ್ತೆಗೆ 200 ಮೀಟರ್ ಆವರಣಗೋಡೆ, ಸ್ವಲ್ಪ ಪ್ರದೇಶದಲ್ಲಿ ಕಾಂಕ್ರೀಟ್ ತಡೆಗೋಡೆ ಮಾತ್ರ ನಿರ್ಮಿಸಲಾಗಿದೆ. ಬಳಿಕ ಯಾವುದೇ ಕಾಮಗಾರಿ ಇಲ್ಲಿ ನಡೆದಿಲ್ಲ.
ಹೊಳೆಯ ಮಣ್ಣು ತಪಾಸಣೆ ಮತ್ತಿತರ ಕಾರ್ಯಗಳು ಈ ಹಿಂದೆಯೇ ನಡೆಸಲಾಗಿತ್ತು. ಕಾಮಗಾರಿಗಾಗಿ ತಂದಿರಿಸಿದ ಉಪಕರಣಗಳು, ಯಂತ್ರಗಳು ತುಕ್ಕುಹಿಡಿಯುತ್ತಿವೆ. ಕಳೆದ ಮೂರು ತಿಂಗಳಿಂದಲೂ ಯಾವುದೇ ನಿರ್ಮಾಣ ಕಾರ್ಯ ನಡೆದಿಲ್ಲ. ನೌಕರರಿಲ್ಲದ್ದರಿಂದ ಕ್ಯಾಂಪ್ ಕಚೇರಿಯನ್ನು ಮುಚ್ಚಲಾಗಿದೆ. ಯು.ಎಲ್.ಸಿ.ಸಿ. ಕಂಪನಿ ನಿರ್ಮಾಣ ಕಾಮಗಾರಿ ವಹಿಸಿಕೊಂಡಿತ್ತು. ಮಳೆಯ ಕಾರಣ ನಿರ್ಮಾಣ ಕಾರ್ಯ ಸ್ಥಗಿತಗೊಳಿಸಲಾಗಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಮಳೆ ಕಡಿಮೆಯಾಗಿ ತಿಂಗಳುಗಳಾಗುತ್ತಿದ್ದರೂ ಮತ್ತೆ ನಿರ್ಮಾಣ ಕಾರ್ಯ ಆರಂಭಿಸದಿರುವುದು ಸ್ಥಳೀಯರು ಪ್ರತಿಭಟನೆ ಕೈಗೆತ್ತಿಕೊಳ್ಳುವಂತೆ ಮಾಡಿದೆ.
ಕಾಮಗಾರಿ ಪೂರ್ಣಗೊಳ್ಳುವುದರೊಂದಿಗೆ ಕುಂಬಳೆ, ಮಂಗಲ್ಪಾಡಿ ಪಂಚಾಯಿತಿಗಳ ಇಚ್ಲಂಗೋಡು, ಬಂಬ್ರಾಣ ಪ್ರದೇಶಗಳ ನಾಗರಿಕರ ಸುದೀರ್ಘ ಕಾಲದ ಬೇಡಿಕೆ ಈಡೇರಲಿದೆ. ಆದರೆ, ನಿರ್ಮಾಣ ಕಾರ್ಯ ಶೀಘ್ರ ಆರಂಭಗೊಂಡು ನಿರ್ಮಾಣ ಪೂರ್ತಿಗೊಳಿಸಬೇಕಾದ ಹೊಣೆ ಅಧಿಕಾರಿಗಳ ಮೇಲಿದೆ.
ಆರ್.ಐ.ಡಿ.ಎಫ್‌ನಲ್ಲಿ ಒಳಪಡಿಸಿ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ. ಹಳೆಯ ಅಣೆಕಟ್ಟಿನ ಬದಲಿಗೆ 118 ಮೀಟರ್ ಉದ್ದದ ಉಪ್ಪುನೀರು ಪ್ರತಿರೋಧ ರೆಗ್ಯುಲೇಟರ್ ಕಂ ಬ್ರಿಡ್ಜ್ ಇಲ್ಲಿ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಸಮುದ್ರದಿಂದ ನೀರು ಹರಿದು ಬರುವುದನ್ನು ತಡೆಯುವುದರ ಜತೆಗೆ ಕುಂಬಳೆ, ಮಂಗಲ್ಪಾಡಿ ಎರಡೂ ಪಂಚಾಯಿತಿಗಳ 999 ಹೆಕ್ಟೇರ್ ಕೃಷಿ ಭೂಮಿಯನ್ನು ಸಂರಕ್ಷಿಸುವುದು ಈ ಯೋಜನೆಯ ಮುಖ್ಯ ಉದ್ದೇಶ. ಸುತ್ತಮುತ್ತಲಿನ ಪ್ರದೇಶದ ಭೂಗರ್ಭದ ಜಲಮಟ್ಟ ಹೆಚ್ಚಿಸಲು ಇದು ಸಹಕಾರಿಯೆಂದು ನಿರೀಕ್ಷಿಸಲಾಗಿದೆ.