ಜಿಲ್ಲೆ

ಓಮ್ನಿಯಲ್ಲಿ ಸಿಲುಕಿದ್ದ ಚಾಲಕನ ರಕ್ಷಣೆ

ಶಿವಮೊಗ್ಗ: ಸಾಗರ ತಾಲೂಕಿನ ಶಿರವಂತೆ ಗ್ರಾಮದ ಬಳಿ ಭಾನುವಾರ ಬೆಳಗಿನಜಾವ ರಸ್ತೆ ಅಪಘಾತದಲ್ಲಿ ಓಮ್ನಿಯಲ್ಲಿ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿದ್ದ ಚಾಲಕನನ್ನು ಇಆರ್‌ಎಸ್‌ಎಸ್ 112 ವಾಹನದ ಸಿಬ್ಬಂದಿ ಸತತ ಮೂರು ಗಂಟೆ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ.

ಚಾಲಕ ಪ್ರವೀಣ್ ಪ್ರಾಣಾಪಾಯದಿಂದ ಪಾರಾದವರು. ಬೆಳಗಿನಜಾವ ಹೊಸನಗರ ಕಡೆಯಿಂದ ಕುಮಟಕ್ಕೆ ಹೋಗುತ್ತಿದ್ದ ಮಾರುತಿ ಓಮ್ನಿ ಶಿರುವಂತೆ ಬಳಿ ಅಪಘಾತ ಆಗಿರುವ ಬಗ್ಗೆ ಸ್ಥಳೀಯರು 112 ಗೆ ಕರೆ ಮಾಡಿದ್ದರು. ಸಾಗರ ಗ್ರಾಮಂತರ ಠಾಣೆ ಮುಖ್ಯ ಪೇದೆ ಎಂ.ಬಿ.ಹುಚ್ಚಪ್ಪ ಮತ್ತು ಚಾಲಕ ಸಂದೀಪ್ ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ ಓಮ್ನಿಯಲ್ಲಿ ಚಾಲಕ ಪ್ರವೀಣ್ ಸಿಲುಕಿಕೊಂಡಿದ್ದರು. ಹೊರಬರಲು ಸಾಧ್ಯವಾಗದೇ ಒದ್ದಾಡುತ್ತಿದ್ದರು. ತಕ್ಷಣ ಸಾಗರ ಟೌನ್‌ಗೆ ತೆರಳಿ ಕಾರ್ ಮೆಕಾನಿಕ್‌ನನ್ನು ಕರೆದುಕೊಂಡು ಬಂದು ಸ್ಥಳೀಯರೊಂದಿಗೆ ಮೂರು ಗಂಟೆ ಸತತವಾಗಿ ಪ್ರಯತ್ನಿಸಿ ಪ್ರವೀಣ್‌ನನ್ನು ರಕ್ಷಿಸಿದ್ದಾರೆ.

ಬಳಿಕ ಗಾಯಗೊಂಡಿದ್ದ ಪ್ರವೀಣ್‌ನನ್ನು ಸಾಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಸಿಬ್ಬಂದಿಗಳ ಸಮಯ ಪ್ರಜ್ಞೆ ಮತ್ತು ಉತ್ತಮ ಕಾರ್ಯಕ್ಕೆ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಮತ್ತು ಸಾಗರದ ಎಎಸ್ಪಿ ರೋಹನ್ ಜಗದೀಶ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.