ಮುಂಡರಗಿ: ಶಿರಸಂಗಿ ಲಿಂಗರಾಜರು ಹಾನಗಲ್ಲ ಶ್ರೀ ಗುರು ಕುಮಾರ ಶಿವಯೋಗಿಗಳ ಆಶಯದಂತೆ ಅಖಿಲ ಭಾರತ ವೀರಶೈವ ಮಹಾಸಭೆಯ ಪ್ರಥಮ ಅಧ್ಯಕ್ಷತೆ ವಹಿಸಿಕೊಂಡು ಸಮಾಜಕ್ಕೆ ಅಪಾರ ಕೊಡುಗೆ ನೀಡಿದರು. ಸಮಾಜ ಧರ್ಮಯುತ ಬದ್ಧರಾಗಬೇಕು ಎಂದಿದ್ದರು. ವೀರಶೈವ- ಲಿಂಗಾಯತ ನಾವೆಲ್ಲರೂ ಒಂದೇ ಎನ್ನುವ ಭಾವ ಬರಬೇಕು. ವೀರಶೈವ ಧರ್ಮ ತತ್ವ ಸಿದ್ಧಾಂತಗಳಿಂದ ಶ್ರೀಮಂತವಾಗಿದೆ ಎಂದು ನಾಡೋಜ ಡಾ. ಅನ್ನದಾನೀಶ್ವರ ಶಿವಯೋಗಿಗಳು ಹೇಳಿದರು.
ತಾಲೂಕಿನ ಬರದೂರ ಗ್ರಾಮದ ಕಾಶಿಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ತ್ಯಾಗವೀರ ಶಿರಸಂಗಿ ಲಿಂಗರಾಜ ಸೇವಾ ಸಂಸ್ಥೆ (ರಿ) ಹಾಗೂ ಶ್ರೀಲಿಂಗರಾಜ ಜಯಂತ್ಯುತ್ಸವ ಸಮಿತಿ ಆಶ್ರಯದಲ್ಲಿ ಮಂಗಳವಾರ ಜರುಗಿದ ಶ್ರೀ ಲಿಂಗರಾಜರ 164ನೇ ಜಯಂತ್ಯುತ್ಸವ ಹಾಗೂ ಶ್ರೀ ಸಿದ್ದರಾಮೇಶ್ವರರ 853ನೇ ಜಯಂತ್ಯುತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಇಷ್ಟಲಿಂಗ ಎಂದರೆ ಅಂತರಂಗ ಚೈತನ್ಯವಿದ್ದಂತೆ ಅದು ಸಂಕಷ್ಟವನ್ನು ದೂರ ಮಾಡುತ್ತದೆ. ಇಷ್ಟಲಿಂಗ ಪೂಜೆ ಮಾಡುವವರು ತಾವೇ ತತ್ತ ಅಳವಡಿಸಿಕೊಳ್ಳುತ್ತಾರೆ. ವೀರಶೈವ ತತ್ವದಪರಿಪೂರ್ಣತೆ ಅರಿಯಬೇಕು. ಬಸವಾದಿ ಶರಣರು ಕಾಯಕ ಸಿದ್ಧಾಂತವನ್ನು ಕಲಿಸಿಕೊಟ್ಟರು. ಶರಣ ತತ್ವದ ಅರ್ಥವನ್ನು ತಿಳಿಯಬೇಕು. ಸಿರಸಂಗಿ ಲಿಂಗರಾಜರು ಸಮಾಜಕ್ಕಾಗಿ ತಮ್ಮ ಸ್ವತ್ತು ತ್ಯಾಗ ಮಾಡಿದರು. ಮನುಷ್ಯ ಪರೋಪಕಾರ ಮನೋಭಾವ ಹೊಂದಬೇಕು ಎಂದರು.
ಮಾಜಿ ಸಚಿವ ಎಸ್.ಎಸ್. ಪಾಟೀಲ ಮಾತನಾಡಿ, ಲಿಂಗರಾಜರನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದು. ಎಲ್ಲ ಲಿಂಗಾಯತರು ಸೇರಿ ಜಯಂತಿ ಆಚರಿಸಬೇಕು. ಮಹಿಳೆ- ಪುರುಷ ಎಂಬ ತಾರತಮ್ಯ ಹೋಗಬೇಕು. ಮಹಿಳೆಯರು ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಬೇಕು. ಇಂತಹ ಉತ್ತಮ ವಿಚಾರಗಳನ್ನು ಲಿಂಗರಾಜರು ಹೊಂದಿದ್ದರು. ಅವರ ವಿಚಾರ ಇಂದಿಗೂ ಪ್ರಸ್ತುತವಾಗಿದೆ ಎಂದರು.
ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯಕಾರಿ ಸಮಿತಿ ಸದಸ್ಯ ಡಾ. ಮನು ಬಳಿಗಾರ ಮಾತನಾಡಿ, ಸಿರಸಂಗಿ ಲಿಂಗರಾಜರ ವಿಚಾರಧಾರೆಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು. ಇಡೀ ಸಮಾಜಕ್ಕೆ ಅವರ ಕೊಡುಗೆ ಸಾಕಷ್ಟಿದೆ ಎಂದರು.