ನರಗುಂದ: ರಾಜ್ಯ ಸರ್ಕಾರದ ಗ್ಯಾರಂಟಿಗಳಲ್ಲೊಂದಾದ ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳ ನೋಂದಣಿಯಲ್ಲಿ ರಾಜ್ಯದಲ್ಲಿ ಗದಗ ಜಿಲ್ಲೆ 4ನೇ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ನರಗುಂದ ತಾಲೂಕು 3ನೇ ಸ್ಥಾನದಲ್ಲಿದೆ. ಆ. 30ರಂದು ನಡೆಯಲಿರುವ ಕಾರ್ಯಕ್ರಮ ಉದ್ಘಾಟನೆಯ ನೇರಪ್ರಸಾರ ವೀಕ್ಷಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಪಡಿತರ ಚೀಟಿಯಲ್ಲಿ ಕುಟುಂಬದ ಯಜಮಾನಿ ಎಂದು ಗುರುತಿಸಲ್ಪಡುವ ಮಹಿಳೆಯರು ಪ್ರತಿ ತಿಂಗಳು 2ಸಾವಿರ ರೂಪಾಯಿ ಪಡೆದುಕೊಳ್ಳಲು ಅರ್ಹರು. ಮಹಿಳೆ ಅಥವಾ ಆಕೆಯ ಪತಿ ಜಿಎಸ್‌ಟಿ ಪಾವತಿದಾರರಾಗಿದ್ದರೆ ಅನರ್ಹರು ಎಂದು ಪರಿಗಣಿಸಲಾಗುತ್ತಿದೆ. ಹಾವೇರಿ ಜಿಲ್ಲೆಯಲ್ಲಿ ಈವರೆಗೆ ಶೇ.86.76 ಫಲಾನುಭವಿಗಳು ನೋಂದಣಿ ಮಾಡಿಸಿದ್ದು, ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ. ಚಾಮರಾಜನಗರ ಶೇ.86.37 ದ್ವಿತೀಯ, ಚಿತ್ರದುರ್ಗ ಶೇ.86.35 ತೃತೀಯ ಸ್ಥಾನದಲ್ಲಿದೆ.
ನರಗುಂದ ತಾಲೂಕಿನಲ್ಲಿ ಅಂತ್ಯೋದಯ, ಬಿಪಿಎಲ್, ಎಪಿಎಲ್ ಸೇರಿ ಒಟ್ಟು,23,667 ಕುಟುಂಬಗಳಿವೆ. ಯೋಜನೆಯಡಿ 20,616 ಫಲಾನುಭವಿಗಳು ನೋಂದಣಿ ಮಾಡಿಸಿದ್ದಾರೆ. 20,559 ಫಲಾನುಭವಿಗಳಿಗೆ ಈಗಾಗಲೇ ಮಂಜೂರಾತಿ ಆದೇಶ ಪ್ರತಿ ನೀಡಲಾಗಿದೆ. 3108 ಫಲಾನುಭವಿಗಳು ಕಾರಣಾಂತರಗಳಿಂದ ನೋಂದಣಿ ಮಾಡಿಸಿಕೊಂಡಿಲ್ಲ. ಬಾಕಿ ಉಳಿದಿರುವ ಫಲಾನುಭವಿಗಳು ರೇಷನ್ ಕಾರ್ಡ್ ತಿದ್ದುಪಡಿ, ಅಕೌಂಟ್‌ಗೆ ಆಧಾರ ಕಾರ್ಡ್ ಜೋಡಣೆ ಇತ್ಯಾದಿ ಕಾರ್ಯಗಳಿಗೆ ಕಚೇರಿಗೆ ಮುಗಿಬಿದ್ದಿದ್ದಾರೆ.
ಗದಗ ಜಿಲ್ಲೆಯಲ್ಲಿ ಶಿರಹಟ್ಟಿ ತಾಲೂಕು ಶೇ.88.79ರಷ್ಟು ನೋಂದಣಿಯಾಗಿ ಮೊದಲ ಸ್ಥಾನದಲ್ಲಿದೆ. ಲಕ್ಷ್ಮೇಶ್ವರ ಶೇ.87.30 ಎರಡನೇ, ಗಜೇಂದ್ರಗಡ ಶೇ. 85.97 ನಾಲ್ಕನೇ, ರೋಣ 85.62 ಐದನೇ, ಮುಂಡರಗಿ 85.52 ಆರನೇ ಹಾಗೂ ಗದಗ ಶೇ.82.34 ಕೊನೆಯ ಸ್ಥಾನದಲ್ಲಿದೆ.
ಗೃಹಲಕ್ಷ್ಮೀ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಆ.30ರಂದು ಮೈಸೂರಿನಿಂದ ಚಾಲನೆ ನೀಡುವರು. ನರಗುಂದ ಪಟ್ಟಣ ಸೇರಿ ತಾಲೂಕಿನ 15 ಕಡೆಗಳಲ್ಲಿ ನೇರಪ್ರಸಾರ ವೀಕ್ಷಣೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಗೃಹಲಕ್ಷ್ಮೀ ಯೋಜನೆಗೆ ಅಂಗನವಾಡಿ, ಆಶಾ ಕಾರ್ಯಕರ್ತೆ, ಸಹಾಯಕಿಯರು ಅರ್ಹರೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಎರಡು ದಿನಗಳ ಹಿಂದೆ ತಿಳಿಸಿದ್ದಾರೆ. ತಾಲೂಕಿನ 134 ಅಂಗನವಾಡಿ ಕೇಂದ್ರಗಳ ಪೈಕಿ 125 ಕಾರ್ಯಕರ್ತೆಯರು, 116 ಸಹಾಯಕಿಯರು, 64 ಆಶಾ ಕಾರ್ಯಕರ್ತೆಯರಿದ್ದಾರೆ.
ಗೃಹಲಕ್ಷ್ಮಿ ನೋಂದಣಿಗೆ ನರಗುಂದ ತಾಲೂಕಿನ ಕೆಲವೆಡೆ ಪ್ರಾರಂಭದಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿತ್ತು. ಆದರೂ ಜಿಲ್ಲೆಯಲ್ಲಿ ಮೂರನೇ ಸ್ಥಾನದಲ್ಲಿದೆ. ಬಾಕಿ ಇರುವ ಅರ್ಹ ಫಲಾನುಭವಿಗಳ ಅರ್ಜಿಗಳನ್ನು ಸ್ವೀಕರಿಸಿ ನೋಂದಣಿ ಕಾರ್ಯ ಪೂರ್ಣಗೊಳಿಸಲಾಗುವುದು.I ರೂಪಾ ಗಂಧದ, ಸಿಡಿಪಿಒ