ಜಿಲ್ಲೆ

ಶಿರಾಡಿ ಘಾಟ್ ಸಂಚಾರಕ್ಕೆ ಮುಕ್ತ

ಮಂಗಳೂರು/ಹಾಸನ: ರಾಷ್ಟ್ರೀಯ ಹೆದ್ದಾರಿ 75ರ ಮಂಗಳೂರು-ಬೆಂಗಳೂರು ರಸ್ತೆಯ ಮಾರನಹಳ್ಳಿ-ದೋಣಿಗಾಲ್ ಭಾಗದಲ್ಲಿ ಆಗಿರುವ ಭೂಕುಸಿತ ದುರಸ್ತಿ ಬಹುತೇಕ ಪೂರ್ಣವಾದ ಹಿನ್ನೆಲೆಯಲ್ಲಿ ಶಿರಾಡಿ ಘಾಟಿ ಮಾರ್ಗದಲ್ಲಿ 20 ಟನ್ ಸಾಮರ್ಥ್ಯ ವರೆಗಿನ ವಾಹನಗಳಿಗೆ ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ಸಂಚರಿಸುವುದಕ್ಕೆ ಅವಕಾಶ ನೀಡಿ ಹಾಸನ ಜಿಲ್ಲಾಧಿಕಾರಿ ಆರ್.ಗಿರೀಶ್ ಸೋಮವಾರ ಆದೇಶಿಸಿದ್ದಾರೆ.

ಕಾರುಗಳು, ಜೀಪು, ಟೆಂಪೊ, ಎಲ್‌ಸಿವಿ, ದ್ವಿಚಕ್ರ ವಾಹನ, ಆಂಬುಲೆನ್ಸ್, ಸಾರ್ವಜನಿಕರು ಸಂಚರಿಸುವ ಬಸ್, ರಾಜಹಂಸ, ಐರಾವತ, 20 ಟನ್ ವರೆಗಿನ ಸರಕು ವಾಹನ, 6 ಚಕ್ರದ ವಾಹನಗಳು ಸಂಚರಿಸಬಹುದು.

ಆದರೆ ಬುಲೆಟ್ ಟ್ಯಾಂಕರ್, ಕಾರ್ಗೊ ಕಂಟೈನರ್, ಲಾಂಗ್ ಚಾಸೀಸ್ ವಾಹನ, ಮಲ್ಟಿ ಆಕ್ಸಿಲ್ ಟ್ರೈಲರ್ ಮತ್ತಿತರ ಅಧಿಕ ಭಾರದ ಸರಕು ಸಾಗಣೆ ವಾಹನಗಳ ಸಂಚಾರವನ್ನು ದಿನದ 24 ಗಂಟೆಯೂ ನಿರ್ಬಂಧಿಸಲಾಗಿದೆ. ಆ ವಾಹನಗಳು ಹಿಂದೆ ತಿಳಿಸಿದಂತೆ ಬದಲಿ ಮಾರ್ಗದಲ್ಲಿ ಸಂಚರಿಸಲು ಸೂಚಿಸಿದೆ.