ಜಿಲ್ಲೆ

ಶಿರಾಡಿ ಘಾಟಿಯಲ್ಲಿ ಸಿಂಗಲ್‌ಲೇನ್ ಸಂಚಾರ

Mangaluru - Shravan Kumar Nala

ಮಂಗಳೂರು: ಶಿರಾಡಿ ಘಾಟಿಯಲ್ಲಿ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ಮುಂದಿನ ಜೂ.30ರೊಳಗೆ ಪೂರ್ಣಗೊಳಿಸ ಬೇಕಿರುವ ಕಾರಣ ಮಾ.15ರಿಂದ ಸಿಂಗಲ್‌ಲೇನ್ ರಸ್ತೆ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.

ಒಂದು ತಿಂಗಳು ವಾಹನ ಸಂಚಾರ ಸ್ಥಗಿತಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾಡಿದ ಮನವಿಯನ್ನು ಹಾಸನ ಜಿಲ್ಲಾಡಳಿತ ತಿರಸ್ಕರಿಸಿದ್ದು, ಪರ್ಯಾಯ ರಸ್ತೆ ವ್ಯವಸ್ಥೆ ಕಲ್ಪಿಸಿ ಕಾಮಗಾರಿಗೆ ಅವಕಾಶ ಕಲ್ಪಿಸಿದೆ. ಒಂದು ವೇಳೆ ಸಂಚಾರ ಸ್ಥಗಿತಗೊಂಡಿದ್ದರೆ ಕರಾವಳಿ ಭಾಗಕ್ಕೆ ಹೆಚ್ಚಿನ ತೊದರೆಯಾಗುವ ಉದ್ದೇಶದಿಂದ ಸಕಲೇಶಪುರ ವ್ಯಾಪ್ತಿಯಲ್ಲಿ ಸಿಂಗಲ್‌ಲೇನ್ ರಸ್ತೆ ಸಂಚಾರಕ್ಕೆ ವ್ಯವಸ್ಥೆ ಮಾಡಿದೆ. ಚತುಷ್ಪಥ ಕಾಂಕ್ರಿಟ್ ರಸ್ತೆ ನಿರ್ಮಿಸುತ್ತಿರುವುದರಿಂದ ಒಂದು ಪಥಕ್ಕೆ ಕಾಂಕ್ರಿಟ್ ಹಾಕಿದಾಗ ಅದರ ಕ್ಯೂರಿಂಗ್‌ಗೆ 25 ದಿನಗಳು ಬೇಕು. ಹೀಗಾಗಿ ಈ ವೇಳೆ ವಾಹನ ಸಂಚಾರ ನಿಷೇಧ ಮಾಡಬೇಕಾಗುತ್ತದೆ ಎಂದು ಗುತ್ತಿಗೆದಾರರು ಸಂಸದ ಶ್ರೇಯಸ್ ಎಂ.ಪಟೇಲ್‌ಗೆ ಮನವರಿಕೆ ಮಾಡಿದ್ದರು.

*ಸಿಂಗಲ್‌ಲೇನ್ ರಸ್ತೆ ಸಂಚಾರಕ್ಕೆ ಪ್ರಸ್ತಾವನೆ

ದ.ಕ ಜಿಲ್ಲೆ ವ್ಯಾಪ್ತಿಯಲ್ಲಿ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಅಲ್ಲಲ್ಲಿ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಆದರೆ ಸಕಲೇಶಪುರ ವ್ಯಾಪ್ತಿಯ ದೋಣಿಗಾಲ್-ಮಂಜರಾಬಾದ್ ಕೋಟೆ ಮುಂಭಾಗ ತುಂಬಾ ಕಡಿದಾದ ಇಳಿಜಾರು ಇರುವುದರಿಂದ ಆ ಸ್ಥಳದಲ್ಲಿ ಮಳೆಗಾಲ ಪ್ರಾರಂಭ ಆಗುವುದರೊಳಗೆ ಕಾಮಗಾರಿ ತ್ವರಿತವಾಗಿ ಮಾಡುವ ಸಲುವಾಗ ಸಿಂಗಲ್‌ಲೇನ್ ರಸ್ತೆ ಸಂಚಾರಕ್ಕೆ ಪ್ರಸ್ತಾವನೆ ಜಿಲ್ಲಾಡಳಿತಕ್ಕೆ ಸಲ್ಲಿಸಲಾಗಿದೆ. ಅನುಮತಿಯೂ ಸಿಕ್ಕಿದೆ. ಈ ಮಾರ್ಗದಲ್ಲಿ ಹಿಂದಿನ ವರ್ಷಗಳಲ್ಲಿ ರಸ್ತೆ ಬಂದ್ ಮಾಡಿದ್ದರಿಂದ ಪ್ರಯಾಣಿಕರಿಗೆ ಹಾಗೂ ದ.ಕ ಹಾಸನ ಸರಕು ಸಾಗಣೆಗೆ ಭಾರೀ ಸಮಸ್ಯೆ ಉಂಟಾಗಿತ್ತು ಎಂದು ಎನ್.ಎಚ್.ಎಐ ಅಧಿ ಕಾರಿಗಳು ತಿಳಿಸಿದ್ದಾರೆ.

*ಚತುಷ್ಪಥ ಕಾಂಕ್ರಿಟ್ ಕಾಮಗಾರಿ

ಚತುಷ್ಪಥ ಕಾಂಕ್ರಿಟ್ ರಸ್ತೆ ನಿರ್ಮಾಣ ಸಂಬಂಧ ಈವರೆಗೆ 4.8 ಕಿ.ಮೀ. ರಸ್ತೆ ಕಾಮಗಾರಿ ಮುಗಿದಿದ್ದು, ದೊಡ್ಡ ತಪ್ಪಲು ಗ್ರಾಮದ ಬಳಿ ಭೂ ಕುಸಿತವಾಗುವ ಸಂಭಾವ್ಯ ಸ್ಥಳದಲ್ಲಿ ರಸ್ತೆ ಜತೆಗೆ ತಡೆಗೋಡೆ ನಿರ್ಮಿಸಲು ಸಕಲೇಶಪುರ-ಶಿರಾಡಿ ಮಾರ್ಗದ ರಾಷ್ಟ್ರೀಯ ಹೆದ್ದಾರಿ ಭಾಗದಲ್ಲಿ ರಸ್ತೆ ಬಂದ್ ಮಾಡಿದರೆ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ವಾಣಿಜ್ಯ, ವಹಿವಾಟು ಸೇರಿದಂತೆ ಧಾರ್ಮಿಕ ಕ್ಷೇತ್ರಗಳಿಗೆ ಸಂಪರ್ಕ ಸ್ಥಗಿತಗೊಳ್ಳಲಿದೆ. ಈನಿಟ್ಟಿನಲ್ಲಿ ದೋಣಿಗಾಲ್‌ನಿಂದ ಕಪ್ಪಳ್ಳವರೆಗೆ ಸಿಂಗಲ್‌ಲೇನ್ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.

-----------------

ಗುಂಡ್ಯದಿಂದ ಸಕಲೇಶಪುರಕ್ಕೆ 40 ಕಿ.ಮೀ.ಇದ್ದು, ಸಕಲೇಶಪುರ ತಾಲೂಕಿನ ಮಾರನಹಳ್ಳಿವರೆಗೂ ರಸ್ತೆ ಕಾಮಗಾರಿ ಮುಗಿದಿದೆ. ಮಾರನಹಳ್ಳಿ, ದೊಡ್ಡ ತಪ್ಪಲು, ದೋಣಿಗಲ್ ಗ್ರಾಮದವರೆಗೂ ಅಲ್ಲಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ದೋಣಿಗಾಲ್-ಮಾರನಹಳ್ಳಿ ನಡುವಿನ ಚತುಷ್ಪಥ ಕಾಮಗಾರಿಗಾಗಿ ಹಿನ್ನೆಲೆಯಲ್ಲಿ ಹೆದ್ದಾರಿ ಬಂದ್ ಮಾಡುವುದಿಲ್ಲ. ಬದಲಿಗೆ ದೋಣಿಗಾಲ್‌ನಿಂದ ಕಪ್ಪಳ್ಳಿ ವರೆಗೆ ಸಿಂಗಲ್‌ಲೇನ್ ಸಂಚಾರಕ್ಕೆ ವ್ಯವಸ್ಥೆ ಮಾಡಲು ತೀರ್ಮಾನಿಸಲಾಗಿದೆ.

ಡಾ. ಎಂ.ಕೆ. ಶೃತಿ, ಸಕಲೇಶಪುರ ಉಪವಿಭಾಗಾಧಿಕಾರಿ

--------------------