ಜಿಲ್ಲೆ

ದಾಳಿಂಬೆ ಕ್ಲಸ್ಟರ್​ ಯೋಜನೆಗೆ ಶಿರಾ ಆಯ್ಕೆ

ತುಮಕೂರು ಡೆಸ್ಕ್

ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಡಾ.ಟಿ.ಬಿ. ಜಯಚಂದ್ರ ಮಾಹಿತಿ

ವಿಜಯವಾಣಿ ಸುದ್ದಿಜಾಲ ಶಿರಾ
ದಾಳಿಂಬೆ ಬೆಳೆಯ ಸಮಗ್ರ ಉತ್ತೇಜನಕ್ಕಾಗಿ ಕೇಂದ್ರ ಸರ್ಕಾರ ದೇಶಾದ್ಯಂತ 53 ಕ್ಲಸ್ಟರ್​ಗಳನ್ನು ಗುರುತಿಸಿದ್ದು, ಈ ಕಾರ್ಯಕ್ರಮದಡಿ ದಾಳಿಂಬೆ ಕ್ಲಸ್ಟರ್​ ಯೋಜನೆಗೆ ಶಿರಾ ತಾಲೂಕು ಆಯ್ಕೆಯಾಗಿದೆ ಎಂದು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಡಾ.ಟಿ.ಬಿ. ಜಯಚಂದ್ರ ತಿಳಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾಳಿಂಬೆ ಬೆಳೆಗೆ ಕಡಿಮೆ ಮಳೆ ಸೂಕ್ತವಾಗಿದ್ದು, ತಾಲೂಕಿನಲ್ಲಿ ಈ ಬೆಳೆಗೆ ಹವಾಗುಣ ಹಾಗೂ ಮಣ್ಣಿನ ಫಲವತ್ತತೆ ಉತ್ತಮವಾಗಿರುವುದರಿಂದ ರೈತರಿಗೆ ದಾಳಿಂಬೆ ಬೆಳೆಯಲು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ದಾಳಿಂಬೆ ಕ್ಲಸ್ಟರ್​ ಯೋಜನೆಗೆ ಶಿರಾ ತಾಲೂಕನ್ನು ಸೇರ್ಪಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಇತ್ತೀಚಿನ ದಿನಗಳಲ್ಲಿ ಭಾರತವು ಹಣ್ಣುಗಳನ್ನು ಇತರ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ನಮ್ಮಲ್ಲಿಯೇ ರೈತರು ಹಣ್ಣುಗಳನ್ನು ಬೆಳೆದು ಹೊರ ದೇಶಗಳಿಗೆ ಮಾರಾಟ ಮಾಡಿ ಹೆಚ್ಚು ಲಾಭಗಳಿಸಲಿ ಎಂಬ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯೋಜನೆ ರೂಪಿಸಿವೆ ಎಂದರು. ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಎಂ.ಎಚ್​.ಶಿವಕುಮಾರ್​ ಮಾತನಾಡಿ, ತಾಲೂಕಿನಲ್ಲಿ ಮುಂದಿನ 5 ವರ್ಷಗಳಲ್ಲಿ ಹೊಸದಾಗಿ 3,000 ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ದಾಳಿಂಬೆ ಬೆಳೆಯುವಂತೆ ರೈತರಿಗೆ ಉತ್ತೇಜನ ನೀಡುವುದು ಇಲಾಖೆಯ ಗುರಿಯಾಗಿದ್ದು, ದಾಳಿಂಬೆ ಬೆಳೆಗೆ ಸಂಬಂಧಿಸಿದಂತೆ ನುರಿತ ವಿಜ್ಞಾನಿಗಳನ್ನು ಬಳಸಿಕೊಂಡು ಬೆಳೆ ನಿರ್ವಹಣಾ ವೆಚ್ಚ ಕಡಿತ, ಅತ್ಯಾಧುನಿಕ ಮಾದರಿಯಲ್ಲಿ ದಾಳಿಂಬೆ ಬೆಳೆಯುವ ಬಗ್ಗೆ ಒತ್ತು ನೀಡಿ ರೈತರಿಗೆ ಮಾರ್ಗದರ್ಶನ ನೀಡಲಾಗುವುದು. ಕಪ್ಪುಚುಕ್ಕೆ ಹಾಗೂ ಸೀಳು ರೋಗ ಸೇರಿದಂತೆ ದಾಳಿಂಬೆ ತೋಟಕ್ಕೆ ತಗುಲುವ ಎಲ್ಲ ರೋಗಗಳನ್ನು ನಿಯಂತ್ರಿಸಲು ತಜ್ಞರ ಅನುಭವವನ್ನು ರೈತರಿಗೆ ಒದಗಿಸಿಕೊಡಲಾಗುವುದು ಎಂದರು.


ಎಐಸಿ ಸಮಾಲೋಚಕ ಮನೋಜ್​ ಕುಶಾಲಪ್ಪ ಮಾತನಾಡಿ, ಯೋಜನೆಯಡಿ ರೈತರಿಗೆ ನಾಟಿಯಿಂದ ಮಾರುಕಟ್ಟೆವರೆಗೆ ತಲುಪಿಸಲು ಎಲ್ಲ ಸೌಕರ್ಯಗಳನ್ನು ಒದಗಿಸುವ ಕೆಲಸವನ್ನು ಸಂಸ್ಥೆ ಮಾಡಲಿದೆ. ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿರುವ ಸುರಕ್ಷಾ ಆ್ಯಪ್​ ಮೂಲಕ ಈಗಾಗಲೇ ದಾಳಿಂಬೆ ಬೆಳೆಯುತ್ತಿರುವ ಹಾಗೂ ಹೊಸದಾಗಿ ಬೆಳೆಯುವ ರೈತರು ನೋಂದಣಿ ಮಾಡಿಕೊಳ್ಳಬೇಕು. ರೈತರ ಆದಾಯ ಹೆಚ್ಚಾಗಲು ಯೋಜನೆಯಡಿ ಮಣ್ಣು ಹಾಗೂ ನೀರಿನ ಪರೀಕ್ಷೆ, ರೋಗ ರಹಿತ ದಾಳಿಂಬೆ ಸಸಿ ನೆಡುವಿಕೆ, ರಸಗೊಬ್ಬರ, ಸೇರಿ ಅಗತ್ಯ ಎಲ್ಲ ಆಧುನಿಕ ಯಂತ್ರೋಪಕರಣ ವಿತರಿಸಲಾಗುವುದು. ದಾಳಿಂಬೆ ಬೆಳೆಯುವ ರೈತರು ಸಂಸ್ಥೆಯ ಮೂಲಕ ನೋಂದಣಿ ಮಾಡಿಕೊಂಡು ಯೋಜನೆಯ ಸೌಲಭ್ಯ ಪಡೆಯಬಹುದು ಎಂದರು.

ಯೋಜನೆಯ ವ್ಯಾಪ್ತಿ: ಶಿರಾ, ಚಿತ್ರದುರ್ಗ, ಹಿರಿಯೂರು, ಹೊಸದುರ್ಗ, ಹೊಳಲ್ಕೆರೆ, ಚಳ್ಳಕೆರೆ ಹಾಗೂ ಮೊಳಕಾಲ್ಮೂರು, ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಮತ್ತು ಕೂಡ್ಲಿಗಿ ತಾಲೂಕುಗಳು ಈ ವ್ಯಾಪ್ತಿಯಲ್ಲಿವೆ.