ಜಿಲ್ಲೆ

ಶಿರಾದಿಂದ ಒಮ್ಮೆಲೆ ಇಬ್ಬರು ಬಿಜೆಪಿ ಶಾಸಕರ ಆಯ್ಕೆ!

arunakunigal

ತುಮಕೂರು: ಬಿಜೆಪಿಗೆ ಬಲವಿಲ್ಲದ ಶಿರಾ ಕ್ಷೇತ್ರದಲ್ಲಿ ಒಮ್ಮೆಲೆ ಇಬ್ಬರು ಶಾಸಕರು ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಅಚ್ಚರಿಯಂತೆ ಈಗಾಗಲೇ ಬಿಜೆಪಿ ಅಭ್ಯರ್ಥಿ ಡಾ.ರಾಜೇಶ್ ಗೌಡ ಆಯ್ಕೆಯಾಗಿದ್ದಾರೆ. ಶಿರಾದವರೇ ಆದ ಎಂ.ಚಿದಾನಂದಗೌಡ ಕೂಡ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಬೆಂಬಲದೊಂದಿಗೆ ಗೆದ್ದು ವಿಧಾನ ಪರಿಷತ್ ಪ್ರವೇಶಿಸುವುದು ಖಚಿತವಾಗಿದೆ.

ಕಾರ್ಯಕರ್ತರೇ ಇಲ್ಲದೆ ಪರದಾಡುತ್ತಿದ್ದ ಶಿರಾ ಕ್ಷೇತ್ರದಲ್ಲಿ ಬಿಜೆಪಿಗೆ ಒಮ್ಮೆಲೆ ಆನೆ ಭಲ ಬಂದಿರುವುದು ರಾಜಕೀಯ ರಂಗದ ವಿಸ್ಮಯ ಎಂದೇ ವಿಶ್ಲೇಷಿಸಲಾಗುತ್ತಿದೆ.

ಚಿತ್ರದುರ್ಗ, ದಾವಣಗೆರೆ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳನ್ನೊಳಗೊಂಡ ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಅ.28ರಂದು ಮತದಾನ ನಡೆದಿತ್ತು. ನವೆಂಬರ್ 2ರಂದೇ ನಡೆಯಬೇಕಿದ್ದ ಮತ ಎಣಿಕೆಯನ್ನು ನವೆಂಬರ್ 10ಕ್ಕೆ ಚುನಾವಣಾ ಆಯೋಗ ಮುಂದೂಡಿತ್ತು. ಸದ್ಯ ಮತ ಎಣಿಕೆ ನಡೆಯುತ್ತಿದ್ದು, ಒಟ್ಟು 14 ಟೇಬಲ್​ಗಳಲ್ಲಿ ನಡೆದ ಮತ ಎಣಿಕೆಯಲ್ಲಿ ಚಿದಾನಂದಗೌಡ 24,217 ಮತ ಪಡೆಯುವ ಮೂಲಕ ಮುನ್ನಡೆ ಕಾಯ್ದುಕೊಂಡಿದ್ದಾರೆ. ಆ ಮೂಲಕ ಅವರ ಗೆಲುವು ಬಹುತೇಕ ಖಚಿತವಾಗಿದೆ.