ತುಮಕೂರು: ಕರೊನಾ ಅಟ್ಟಹಾಸದ ಸಂದರ್ಭದಲ್ಲಿ ನಡೆಯುತ್ತಿರುವ ಶಿರಾ ಉಪಸಮರಕ್ಕೆ ನಾಮಪತ್ರ ಸಲ್ಲಿಸುವ ಮುನ್ನವೇ ಪ್ರಮುಖ ರಾಜಕೀಯ ಪಕ್ಷಗಳು ಬೂತ್‌ಮಟ್ಟದಿಂದಲೇ ಪ್ರಚಾರ ಆರಂಭಿಸಿದ್ದು, ಕೇಂದ್ರ ಚುನಾವಣಾ ಆಯೋಗ ಹೊರಡಿಸಿರುವ ಕರೊನಾ ನಿಯಮಾವಳಿಗಳನ್ನು ಗಾಳಿಗೆ ತೂರಲಾಗಿದೆ. ಹಾಗಾಗಿ, ಶಿರಾ ಕರೊನಾ ಹಾಟ್‌ಸ್ಪಾಟ್ ಆಗುವ ಆತಂಕ ಎದುರಾಗಿದೆ.
ಜಿಲ್ಲೆಯಲ್ಲಿ ಮೊಟ್ಟ ಮೊದಲ ಕರೊನಾ ಪ್ರಕರಣ ದಾಖಲಾಗಿದ್ದ ಶಿರಾದಲ್ಲಿ ಕಳೆದ 3 ತಿಂಗಳಿನಿಂದಲೇ ಉಪಚುನಾವಣೆ ಕಾವು ಕಾಣಿಸಿಕೊಂಡಿದೆ. ಶಾಸಕ ಬಿ.ಸತ್ಯನಾರಾಯಣ ನಿಧನದಿಂದ ತೆರವಾಗಿರುವ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗಿದ್ದು ನವೆಂಬರ್ 3ರಂದು ಚುನಾವಣೆ ನಡೆಯಲಿದೆ. ಕರೊನಾ ಸಂದರ್ಭದಲ್ಲಿ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದ್ದು ಜಿಲ್ಲಾಡಳಿತಕ್ಕೆ ಕೋವಿಡ್ ಮಾರ್ಗಸೂಚಿ ಅನ್ವಯ ಚುನಾವಣೆ ನಡೆಸುವುದು ಸವಾಲೆನಿಸಿದೆ.
ಸಮುದಾಯಕ್ಕೆ ಹರಡಿರುವ ಕರೊನಾ: ತಿಂಗಳಿನಿಂದ ರಾಜ್ಯದಲ್ಲಿ ಕರೊನಾ ಸೋಂಕಿತರ ಪ್ರಮಾಣ ಹೆಚ್ಚಳವಾಗಿದೆ. ಅಲ್ಲದೆ, ಸಮುದಾಯಕ್ಕೆ ಹರಡಿದೆ. ತುಮಕೂರು ಜಿಲ್ಲೆ ಸೇರಿ 13 ಜಿಲ್ಲೆಗಳಲ್ಲಿ ಸೋಂಕಿತರ ಪ್ರಮಾಣವೂ ಹೆಚ್ಚಳವಾಗಿದ್ದು ಇದೇ ವೇಳೆ ಎದುರಾಗಿರುವ ಬೈಎಲೆಕ್ಷನ್ ಜಿಲ್ಲಾಡಳಿತಕ್ಕೆ ತಲೆಬಿಸಿ ತಂದಿದೆ.
ಅಂತರ ಮಾಯ: ರಾಜಕೀಯ ಪಕ್ಷಗಳು ಕ್ಷೇತ್ರದಾದ್ಯಂತ ಬೂತ್ ಮಟ್ಟದಿಂದ ಸಭೆಗಳನ್ನು ಆರಂಭಿಸಿದ್ದು, ಈ ಸಭೆಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಲಾಗಿದೆ. ಎಲ್ಲಿಯೂ ಪರಸ್ಪರ ಅಂತರ ಕಾಪಾಡಿಕೊಳ್ಳುವುದಿರಲಿ, ಮಾಸ್ಕ್ ಧರಿಸದೇ ಇರುವುದು ರೋಗ ವ್ಯಾಪಕವಾಗಿ ಹರಡುವ ಸಾಧ್ಯತೆ ಹೆಚ್ಚಿಸಿದೆ. ಕರೊನಾ ಹಾವಳಿಯ ಕಾಲದಲ್ಲಿ ನಡೆಯುವ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗವು ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಮತದಾನದ ಸಂದರ್ಭದಲ್ಲಿ ಮತದಾರ ಕೈಗವಸು ಧರಿಸುವುದನ್ನು ಕಡ್ಡಾಯ ಮಾಡಿದೆ. ಅಲ್ಲದೆ, ಮನೆ ಮನೆ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕೇವಲ ಐದು ಜನರಿಗೆ ಅವಕಾಶ. ಸಾರ್ವಜನಿಕ ಸಭೆಗಳನ್ನು ನಿಗದಿತ ಸ್ಥಳದಲ್ಲಿ ಆಯೋಜಿಸಬೇಕಿದ್ದು ಕೋವಿಡ್ ಮಾರ್ಗಸೂಚಿಗಳ ಜತೆಗೆ 200ಕ್ಕೂ ಹೆಚ್ಚು ಜನರು ಸಭೆಯಲ್ಲಿ ಸೇರುವಂತಿಲ್ಲ ಎಂಬ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ.
ನಾಮಪತ್ರ ಸಲ್ಲಿಸುವ ಮುನ್ನ ಈಗಾಗಲೇ ರಾಜಕೀಯ ಪಕ್ಷಗಳು ಆಯೋಜಿಸಿರುವ ಸಭೆ-ಸಮಾರಂಭಗಳಲ್ಲಿ ಎಲ್ಲಿಯೂ ಪರಸ್ಪರ ಅಂತರ ಕಾಯ್ದುಕೊಳ್ಳುವುದಾಗಲಿ, ಮಾಸ್ಕ್ ಧರಿಸುವ ನಿಯಮಗಳನ್ನೇ ಪಾಲಿಸದೇ ಇರುವುದು ಕಂಡುಬಂದಿದೆ. ಇಂತಹ ಮೈಮರೆಯುವಿಕೆಯಿಂದ ಕರೊನಾ ‘ಹಾಟ್ ಸ್ಪಾಟ್’ ಆಗಿ ಶಿರಾ ತಾಲೂಕು ಪರಿವರ್ತನೆಗೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಇನ್ನಾದರೂ ರಾಜಕೀಯ ಪಕ್ಷಗಳು, ಕ್ಷೇತ್ರದ ಜನತೇ ಎಚ್ಚೆತ್ತುಕೊಳ್ಳುವ ಅನಿವಾರ್ಯ ಇದೆ.
ಅಂಚೆ ಮತಕ್ಕಿಂತಲೂ ಭಿನ್ನ: ಅಂಚೆ ಮತದಾನ ಆಯ್ಕೆ ಮಾಡಿಕೊಳ್ಳುವ 80 ವರ್ಷ ಮೇಲ್ಪಟ್ಟವರು, ಅಂಗವಿಕಲರಿಗೆ ಮತಗಟ್ಟೆ ಅಧಿಕಾರಿಗಳೇ ಅಂಚೆ ಮತದಾನಕ್ಕೆ ಕೋರುವ ‘ನಮೂನೆ 12ಡಿ’ ಅನ್ನು ಚುನಾವಣಾ ಸಿಬ್ಬಂದಿಯೇ ಮನೆ ಬಾಗಿಲಿಗೆ ತಲುಪಿಸಲಿದ್ದಾರೆ. ಇಡೀ ಪ್ರಕ್ರಿಯೆಯನ್ನು ಚಿತ್ರೀಕರಣ ಮಾಡಲಾಗುತ್ತದೆ. ಇದು ಚುನಾವಣಾ ಸಿಬ್ಬಂದಿ ಹಾಗೂ ಉದ್ಯೋಗದಲ್ಲಿರುವ ವ್ಯಕ್ತಿಗಳಿಗೆ ನೀಡುವ ಅಂಚೆ ಮತದಾನದ ವ್ಯವಸ್ಥೆಗಿಂತ ಭಿನ್ನವಾಗಿರಲಿದೆ.
ರ‌್ಯಾಲಿಗಳಿಗೆ ನಿರ್ಬಂಧ: ಕರೊನಾ ಹಿನ್ನೆಲೆಯಲ್ಲಿ ಮನೆ ಮನೆ ಪ್ರಚಾರ, ಬಹಿರಂಗ ಪ್ರಚಾರಗಳಿಗೆ ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಕೇವಲ ಐದು ಮಂದಿಗೆ ಮನೆ-ಮನೆ ಪ್ರಚಾರ ನಡೆಸಲು ಅವಕಾಶ ನೀಡಲಾಗಿದೆ. ಅಲ್ಲದೆ, ಸಾರ್ವಜನಿಕ ಸಭೆಗಳಲ್ಲಿ ಕೇವಲ 200 ಮಂದಿ ಭಾಗವಹಿಸಲು ಅವಕಾಶ ಇದೆ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಕನಿಷ್ಠ ವಾಹನಗಳ ಬಳಕೆ ಮಾಡಬೇಕಿದೆ. ಇದರ ಜತೆಗೆ ನಾಮಪತ್ರ ಸಲ್ಲಿಕೆ ಸೇರಿ ಇನ್ನಿತರ ಚುನಾವಣಾ ಪ್ರಕ್ರಿಯೆಗಳಿಗೆ ಆನ್‌ಲೈನ್‌ನಲ್ಲಿ ವ್ಯವಹರಿಸಲು ಅವಕಾಶ ನೀಡಲಾಗಿದೆ. ಈ ನಿಯಮಗಳನ್ನು ರಾಜಕೀಯ ಪಕ್ಷಗಳು ಕಡ್ಡಾಯವಾಗಿ ಪಾಲಿಸಿದ್ದೇ ಆದಲ್ಲಿ ಕರೊನಾ ಹರಡುವಿಕೆ ತಡೆಗಟ್ಟಬಹುದಾಗಿದೆ. ಇಲ್ಲವಾದಲ್ಲಿ ಕರೊನಾ ಅಟ್ಟಹಾಸ ಮೆರೆಯಲಿದೆ.
ರಾಜಕೀಯ ಸಭೆ-ಸಮಾವೇಶಗಳನ್ನು ಆಯೋಜಿಸುವ ಸ್ಥಳಗಳಲ್ಲಿ ಕೋವಿಡ್ ಮಾರ್ಗಸೂಚಿ ಅನುಸರಿಸುವುದು ಕಡ್ಡಾಯ. ಸೆಕ್ಟರ್ ಹೆಲ್ತ್ ರೆಗ್ಯುಲೇಟರ್ ನೇಮಿಸಲಾಗುವುದು. ಹೊಸ ಮಾರ್ಗಸೂಚಿ ಅನ್ವಯ ಒಳಾಂಗಣದಲ್ಲಿ ಆಸನ ಸಾಮರ್ಥ್ಯದಲ್ಲಿ ಶೇ.50 ಬಳಸಿಕೊಳ್ಳಬಹುದು. ಇನ್ನೂ ಹೊರಾಂಗಣದಲ್ಲಿ ಎಷ್ಟು ಜನರನ್ನು ಬೇಕಾದರೂ ರ‌್ಯಾಲಿಗಳಿಗೆ ಸೇರಿಸಬಹುದು. ಆದರೆ, ಪರಸ್ಪರ ಅಂತರ ಕಾಯ್ದುಕೊಳ್ಳುವುದರ ಜತೆಗೆ ಮಾಸ್ಕ್ ಧರಿಸುವುದು ಕಡ್ಡಾಯ. ಇನ್ನೂ ಶಿರಾ ಕ್ಷೇತ್ರದಲ್ಲಿ ರಾಜಕೀಯ ಸಮಾವೇಶಗಳಿಗೆ 17 ಸ್ಥಳಗಳನ್ನು ಗುರುತಿಸಲಾಗಿದ್ದು ಇಲ್ಲಿ ಮಾರ್ಕಿಂಗ್ ಮಾಡಲಾಗುವುದು. ಅಲ್ಲದೆ, ನೂಕುನುಗ್ಗಲು ಉಂಟಾಗದಂತೆ ಒಳ, ಹೊರಗೆ ಹೋಗಲು ಪ್ರತ್ಯೇಕ ಮಾರ್ಗಗಳನ್ನು ಮಾಡಲಾಗುವುದು. ಇದನ್ನು ಉಲ್ಲಂಘಿಸಿದ್ದೇ ಆದಲ್ಲಿ ಸಂಘಟಕರ ವಿರುದ್ಧ ದೂರು ದಾಖಲಿಸಿಕೊಳ್ಳಲಾಗುವುದು. ಡಾ.ಕೆ.ರಾಕೇಶ್ ಕುಮಾರ್ ಜಿಲ್ಲಾಧಿಕಾರಿ