ಮುಂಡಗೋಡ: ತಾಲೂಕಿನ ಕಾತೂರ ಪಂಚಾಯಿತಿ ವ್ಯಾಪ್ತಿಯ ಶಿಂಗ್ನಳ್ಳಿ ಹಾಗೂ ಹುಲಿಹೊಂಡ ಭಾಗದಲ್ಲಿ ಐದು ಕಾಡಾನೆಗಳು ಬೆಳೆಗಳನ್ನು ತಿಂದು, ತುಳಿದು ನಾಶಪಡಿಸುತ್ತಿವೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ನಾಲ್ಕು ತಿಂಗಳಿಂದ ತಾಲೂಕಿನಲ್ಲಿ ಬೀಡು ಬಿಟ್ಟಿರುವ ಹತ್ತಾರು ಕಾಡಾನೆಗಳು ಪ್ರತಿದಿನವೂ ಒಂದೊಂದು ಕಡೆಗಳಲ್ಲಿ ದಾಳಿ ನಡೆಸುತ್ತಿವೆ. ಇಪ್ಪತ್ತಕ್ಕೂ ಹೆಚ್ಚು ಕಾಡಾನೆಗಳ ಪೈಕಿ ಹತ್ತಕ್ಕೂ ಹೆಚ್ಚು ಕಾಡಾನೆಗಳು ದಾಂಡೇಲಿಯತ್ತ ತೆರಳಿವೆ. ಸದ್ಯ ಕಾತೂರ ಭಾಗದಲ್ಲಿ ಐದು ಹಾಗೂ ಕ್ಯಾತ್ನಳ್ಳಿ ಭಾಗದಲ್ಲಿ ಮೂರು ಕಾಡಾನೆಗಳು ಸಂಚರಿಸುತ್ತಿರುವುದು ಕಂಡು ಬಂದಿದೆ.
ಹಗಲಿನಲ್ಲಿ ಅರಣ್ಯ ಪ್ರದೇಶದಲ್ಲಿರುವ ಕೆರೆ ಹಾಗೂ ಹಳ್ಳದ ದಡದಲ್ಲಿ ಕಾಲ ಕಳೆಯುವ ಕಾಡಾನೆಗಳು ಕತ್ತಲಾಗುತ್ತಿದ್ದಂತೆ ಗ್ರಾಮಗಳತ್ತ ಬರುತ್ತವೆ. ಎರಡು ದಿನಗಳ ಹಿಂದೆ ತಾಲೂಕಿನ ಶಿಂಗ್ನಳ್ಳಿ ಹಾಗೂ ಹುಲಿಹೊಂಡ ಗ್ರಾಮಗಳ ಬಳಿಯ ಐದು ಕಾಡಾನೆಗಳು ಜಮೀನಿನಲ್ಲಿ ಕಷ್ಟಪಟ್ಟು ಹಗಲು ರಾತ್ರಿ ನೀರು ಹಾಯಿಸಿ ಬೆಳೆದಿದ್ದ ಗೋವಿನಜೋಳ ಹಾಗೂ ಬಾಳೆ ಬೆಳೆ ಹಾಳುಗೆಡವಿವೆ. ಘಟನಾ ಸ್ಥಳಕ್ಕೆ ಕಾತೂರ ಆರ್ಎಫ್ಒ ವೀರೇಶ ಹಾಗೂ ಉಪ ವಲಯ ಅರಣ್ಯಾಧಿಕಾರಿ, ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ಬೆಳೆ ಹಾನಿ ಪಂಚನಾಮೆ ಮಾಡಿದ್ದಾರೆ.
ರೈತರ ಆಗ್ರಹ: ಕಾಡಾನೆಗಳು ತಾಲೂಕಿಗೆ ಆಗಮಿಸಿ ನಾಲ್ಕು ತಿಂಗಳಾಗುತ್ತ ಬಂದಿದ್ದು ನಿರಂತರವಾಗಿ ಬೆಳೆಯನ್ನು ನಾಶ ಪಡಿಸುತ್ತಿವೆ ಅರಣ್ಯ ಇಲಾಖೆಯವರು ಕಾಡಾನೆಗಳನ್ನು ತಾಲೂಕಿನಿಂದ ಓಡಿಸುವ ಕೆಲಸವನ್ನು ಮಾಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.