ಶಿವಮೊಗ್ಗ: ನಗರದ ಸಹಚೇತನ ನಾಟ್ಯಾಲಯದಿಂದ ಆ.26ರಿಂದ ಮೂರು ದಿನ ಕುವೆಂಪು ರಂಗಮಂದಿರದಲ್ಲಿ ನಾಟ್ಯಾರಾಧನಾ-11 ರಾಷ್ಟ್ರೀಯ ನೃತ್ಯ ಮಹೋತ್ಸವ ಏರ್ಪಡಿಸಲಾಗಿದೆ ಎಂದು ಸಹಚೇತನದ ನೃತ್ಯ ಗುರು ಸಹನಾ ಚೇತನ್ ತಿಳಿಸಿದರು.
ಆ.26 ರಿಂದ 28ರವರೆಗೆ ಪ್ರತಿ ದಿನ ಸಂಜೆ 6.30ರಿಂದ ನೃತ್ಯ ಕಾರ್ಯಕ್ರಮಗಳು ಜರುಗಲಿವೆ. ಭಾರತೀಯ ಕಲೆ ಪ್ರಾಕಾರ, ಸಂಸ್ಕೃತಿಯನ್ನು ಇಂದಿನ ಪೀಳಿಗೆಗೆ ತಲುಪಿಸುವುದೇ ನಾಟ್ಯಾರಾಧನೆಯ ಮುಖ್ಯ ಉದ್ಧೇಶವಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಹಚೇತನ ನಾಟ್ಯಾಲಯದ ಮಕ್ಕಳು ಆ.26ರ ಸಂಜೆ ಜಯ ಜಗನ್ಮಾತೃಕೆ ಎಂಬ ನೃತ್ಯ ರೂಪಕ ಪ್ರಸ್ತುತಪಡಿಸಲಿದ್ದಾರೆ. 27ರ ಸಂಜೆ ಭರತನಾಟ್ಯ ಕ್ಷೇತ್ರದ ಖ್ಯಾತನಾಮರಾದ ಪಾರ್ಶ್ವನಾಥ್ ಎಸ್. ಉಪಾಧ್ಯೆ ರಾಮಾಯಣದ ಮರುಚಿತ್ರಣದ ಅಡಿಯಲ್ಲಿ ರೂಪುಗೊಂಡ ನೃತ್ಯ ರೂಪಕವಾದ ಆಭಾ(ಸೀತೆ)ವನ್ನು ಸಹಕಲಾವಿದರಾದ ಶೃತಿ ಗೋಪಾಲ್ ಹಾಗೂ ಪಿ.ವಿ.ಆದಿತ್ಯ ಅವರ ಜತೆಗೂಡಿ ಪ್ರಸ್ತುತಪಡಿಸಲಿದ್ದಾರೆ ಎಂದರು.
ಆ.28ರ ಸಂಜೆ ನಾಟ್ಯಾಲಯದ ನೃತ್ಯಗುರು ಸಹನಾ ಚೇತನ್ ಅವರು ಏಕವ್ಯಕ್ತಿ ನೃತ್ಯ ರೂಪಕ ಬ್ರಹ್ಮಜ್ಞಾನ ಜಿಜ್ಞಾಸು ಮೈತ್ರೇಯಿ ಪ್ರಸ್ತುತ ಪಡಿಸಲಿದ್ದಾರೆ. ಬಳಿಕ ನಾಟ್ಯಾಲಯದ ಹಿರಿಯ ವಿದ್ಯಾರ್ಥಿಗಳೊಡಗೂಡಿ ಓಂ ನಮಃ ಶಿವಾಯ ಎಂಬ ನೃತ್ಯರೂಪಕವನ್ನು ಸಾದರಪಡಿಸಲಿದ್ದಾರೆ.
ಮೂರು ದಿನ ನೃತ್ಯ ಕಾರ್ಯಕ್ರಮಕ್ಕೂ ಮುನ್ನ ಚುಟುಕು ಸಭಾ ಕಾರ್ಯಕ್ರಮ ನಡೆಯಲಿದೆ. ಆ.26ರ ಸಂಜೆ ಶಾಸಕ ಕೆ.ಎಸ್.ಈಶ್ವರಪ್ಪ ನೃತ್ಯ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಯು.ಉಮೇಶ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಸಹನಾ ಚೇತನ್ ತಿಳಿಸಿದರು.
27ರ ಸಭಾ ಕಾರ್ಯಕ್ರಮದಲ್ಲಿ ಕಲಾವಿದರನ್ನು ಸನ್ಮಾನಿಸಲಾಗುವುದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಉಪಸ್ಥಿತರಿರುತ್ತಾರೆ. 28ರ ಸಮಾರೋಪದಲ್ಲಿ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ನಗರ ಪಾಲಿಕೆ ಸದಸ್ಯ ಪಿ.ಪ್ರಭಾಕರ ಮುಖ್ಯಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.