ಜಿಲ್ಲೆ

ಮೂರು ತಾಲೂಕಿನಲ್ಲಿ ಜನಚೈತನ್ಯ ಯಾತ್ರೆ

Shivamogga

ಶಿವಮೊಗ್ಗ: ಜನರಲ್ಲಿ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸಲು ನಮ್ಮ ಪಕ್ಷದಿಂದ ಕರ್ನಾಟಕ ಜನಚೈತನ್ಯ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಈ ಯಾತ್ರೆಯು ಆ.26 ಹಾಗೂ 27ರಂದು ಸಾಗರ, ತೀರ್ಥಹಳ್ಳಿ ಹಾಗೂ ಭದ್ರಾವತಿ ತಾಲೂಕಿನಲ್ಲಿ ನಡೆಯಲಿದೆ ಎಂದು ಕೆಆರ್‌ಎಸ್(ಕರ್ನಾಟಕ ರಾಷ್ಟ್ರ ಸಮಿತಿ) ಪಕ್ಷದ ಜಿಲ್ಲಾ ಸಂಚಾಲಕ ಅರುಣ್ ಕಾನಹಳ್ಳಿ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸುವ ಜತೆಗೆ ಜನರಲ್ಲಿ ನಮ್ಮ ಪಕ್ಷದ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಿಸುವುದು ನಮ್ಮ ಮುಖ್ಯ ಉದ್ಧೇಶವಾಗಿದೆ. ರಾಜ್ಯದಲ್ಲಿ ಮಿತಿಮೀರಿದ ಭ್ರಷ್ಟಾಚಾರವಿದ್ದು, ಇದರ ನಿಯಂತ್ರಣ ಅತ್ಯವಶ್ಯ. ಹೀಗಾಗಿ ಶಾಂತವೇರಿ ಗೋಪಾಲಗೌಡರ ಜನ್ಮ ಶತಾಬ್ಧಿ ಕಾರ್ಯಾಕ್ರಮದೊಂದಿಗೆ ಜನಚೈತನ್ಯ ಯಾತ್ರೆಯನ್ನು ಜೋಡಿಸಲಾಗಿದೆ ಎಂದರು.

ಬಿಜೆಪಿ ಸರ್ಕಾರದ ವಿರುದ್ಧ ಅನೇಕ ಆರೋಪಗಳು ಕೇಳಿ ಬಂದಿವೆ. ಮುಖ್ಯವಾಗಿ ಶೇ.40 ಕಮೀಷನ್ ಸರ್ಕಾರ ಎಂಬ ಅಭಿಪ್ರಾಯ ಸಾರ್ವತ್ರಿಕವಾಗುತ್ತಿದೆ. ಅದಕ್ಕೆ ಸರಿಯಾಗಿ ವಿವಿಧ ನೇಮಕಾತಿ, ವರ್ಗಾವಣೆಯಲ್ಲಿ ಹಣ ಕೈ ಬದಲಾಗುತ್ತಿರುವ ಆರೋಪಗಳಿವೆ. ಹಣದ ಅವ್ಯವಹಾರದಲ್ಲಿ ಆರೋಪಿಯಾಗಿರುವ ವ್ಯಕ್ತಿ ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿದ್ದಾರೆ. ಜೆಡಿಎಸ್ ಅವಕಾಶವಾದಿ ರಾಜಕೀಯ ಮಾಡುತ್ತಿದೆ ಇದೆಲ್ಲವನ್ನೂ ಜನರಿಗೆ ವಿವರಿಸಲು ಜನಚೈತನ್ಯ ಯಾತ್ರೆಯಿಂದ ಅನುಕೂಲವಾಗಲಿದೆ ಎಂದು ಹೇಳಿದರು.

ಚುನಾವಣೆಯಲ್ಲಿ ಸ್ಪರ್ಧೆ

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ ವಿಧಾನಸಭಾ ಕ್ಷೇತ್ರದಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ನಮ್ಮ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆ ಹಾಗೂ ತಾಲೂಕು ಘಟಕಗಳನ್ನು ಕೂಡಲೇ ರಚಿಸಲಾಗುವುದು. ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗೆ ಅತ್ಯಲ್ಪ ಮತಗಳು ಬಂದರೂ ಚಿಂತೆಯಿಲ್ಲ. ಭ್ರಷ್ಟಾಚಾರ ವಿರುದ್ಧದ ಹೋರಾಟವಷ್ಟೇ ನಮಗೆ ಮುಖ್ಯ. ಚುನಾವಣೆಯ ಸೋಲು, ಗೆಲುವಲ್ಲ ಎಂದು ಅರುಣ್ ಕಾನಹಳ್ಳಿ ಹೇಳಿದರು.