ಜಿಲ್ಲೆ

ಹೊನ್ನಾವರ ಬಳಿ ಕಾರು ಪಲ್ಟಿ: ಗೋವಾ ಹೊರಟಿದ್ದ ಶಿವಮೊಗ್ಗದ ನವ ವಿವಾಹಿತ ಸಾವು

ಶಿವಮೊಗ್ಗ: ಹೊನ್ನಾವರ ತಾಲೂಕಿನ ಹಡಿನಬಾಳ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಗುರುವಾರ ನಸುಕಿನಲ್ಲಿ ಕಾರು ಪಲ್ಟಿಯಾಗಿ ಸೇತುವೆ ಕೆಳಗೆ ಬಿದ್ದ ಪರಿಣಾಮ ಶಿವಮೊಗ್ಗದ ನವ ವಿವಾಹಿತ ಮೃತಪಟ್ಟಿದ್ದು, ಕಾರು ಚಾಲಕ ಸೇರಿ ನಾಲ್ವರು ಗಾಯಗೊಂಡಿದ್ದಾರೆ.
ಮೃತ ನವ ವಿವಾಹಿತನನ್ನು ಶಿವಮೊಗ್ಗ ಗಾಂಧಿ ಬಜಾರ್‌ನ ರಾಹುಲ್ (32) ಎಂದು ಗುರುತಿಸಲಾಗಿದೆ. ಆತನ ಪತ್ನಿ ನೇಹಾ (27), ನಗರದ ಕೆ.ಆರ್.ಪುರಂನ ಚೇತನ್ (29) ಮತ್ತು ವಂದನಾ(25) ದಂಪತಿ, ಗೋಪಾಳ 2ನೇ ಕ್ರಾಸ್‌ನ ನಿವಾಸಿ, ಉಡುಪಿ ಮೂಲದ ಕಾರು ಚಾಲಕ ಶರತ್‌ಕುಮಾರ್ (27) ಗಾಯಗೊಂಡಿದ್ದಾರೆ.
ಶಿವಮೊಗ್ಗದಿಂದ ಹೊನ್ನಾವರ ಮಾರ್ಗವಾಗಿ ಬುಧವಾರ ರಾತ್ರಿ ಗೋವಾಗೆ ತೆರಳುವ ವೇಳೆ ಅವಘಡ ಸಂಭವಿಸಿದೆ. ಕಾರು ಹಡಿನಬಾಳ ಸೇತುವೆ ಎಡಭಾಗದ ರಸ್ತೆ ಬಿಟ್ಟು 30 ಅಡಿ ಎತ್ತರದ ಸೇತುವೆ ಮೇಲಿಂದ ಬಿದ್ದಿದೆ.
ಅಪಘಾತದಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಗಾಯಾಳುಗಳು ಹೊನ್ನಾವರ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 ಪ್ರವಾಸ ಕೈಗೊಂಡಿದ್ದ ಜೋಡಿ ದಂಪತಿ: ನಗರದಲ್ಲಿ ವಿಮಲ್ ಫಾರ್ಮ ಔಷಧ ಸಗಟು ವ್ಯಾಪಾರಿಯಾಗಿದ್ದ ರಾಹುಲ್ ಕಳೆದ ಮೇ ತಿಂಗಳಲ್ಲಿ ನೇಹಾಳನ್ನು ವಿವಾಹವಾಗಿದ್ದ. ಕರೊನಾ ಇದ್ದ ಕಾರಣ ಈ ಜೋಡಿ ಪ್ರವಾಸ ಕೈಗೊಂಡಿರಲಿಲ್ಲ. ಚೇತನ್-ವಂದನಾ ದಂಪತಿ ವರ್ಷದ ಹಿಂದಷ್ಟೇ ಕೆ.ಆರ್.ಪುರಂನ ಅಪಾರ್ಟ್‌ಮೆಂಟ್‌ಗೆ ಬಂದು ನೆಲೆಸಿದ್ದರು. ಕರೊನಾ ನಿಯಂತ್ರಣಕ್ಕೆ ಬಂದ ಹಿನ್ನಲೆಯಲ್ಲಿ ಸ್ನೇಹಿತನಾಗಿದ್ದ ರಾಹುಲ್ ಮತ್ತು ಚೇತನ್ ದಂಪತಿ ಸಮೇತ ಗೋವಾ ಪ್ಲಾೃನ್ ಹಾಕಿಕೊಂಡಿದ್ದರು. ಅದರಂತೆ ಬುಧವಾರ ರಾತ್ರಿ ಕಾರಿನಲ್ಲಿ ಹೊರಟಿದ್ದರು ಎನ್ನಲಾಗಿದೆ.