ಶಿವಮೊಗ್ಗ: ಪಕ್ಷ ಬಿಟ್ಟು ಹೋದವರು ಮತ್ತೆ ಪಕ್ಷಕ್ಕೆ ಬರಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆ ಆ ಪಕ್ಷದ ಇಂದಿನ ದುಸ್ಥಿತಿಗೆ ನಿದರ್ಶನವಾಗಿದೆ ಎಂದು ಬಿಜೆಪಿ ಒಬಿಸಿ ಮೋರ್ಚಾದ ಪ್ರಭಾರಿ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಬಿಟ್ಟವರನ್ನು ಮತ್ತೆ ಸೇರಿಸಿಕೊಳ್ಳುವುದಿಲ್ಲ ಎಂದು ಘೋಷಿಸಿದ್ದರು. ಈಗ ಮತ್ತೆ ಪಕ್ಷಕ್ಕೆ ಬನ್ನಿ ಎನ್ನುತ್ತಿದ್ದಾರೆ. ಇದರಿಂದ ಕಾಂಗ್ರೆಸ್‌ನ ವಾಸ್ತವ ಸ್ಥಿತಿ ಬಯಲಾಗಿದೆ ಎಂದು ಹೇಳಿದರು.
ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಬಯಸುವವರು ಎರಡು ಲಕ್ಷ ರೂ. ಡಿಡಿ ನೀಡಬೇಕೆಂದು ಕೆಪಿಸಿಸಿ ಫರ್ಮಾನು ಹೊರಡಿಸಿದೆ. ನಿಷ್ಠಾವಂತ ಕಾಂಗ್ರೆಸ್ಸಿಗರು ಎಲ್ಲಿಂದ ಇಷ್ಟೊಂದು ದುಡ್ಡು ಹೊಂದಿಸಲು ಸಾಧ್ಯ? ಬಡವರು ಚುನಾವಣೆಗೆ ಸ್ಪರ್ಧೆ ಮಾಡಬಾರದು ಎಂಬುದು ಕೆಪಿಸಿಸಿ ಉದ್ಧೇಶವಾಗಿರುವಂತಿದೆ ಎಂದರು.
ಎಐಸಿಸಿ ಅಧ್ಯಕ್ಷ, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿಎಂ ಸ್ಥಾನ ತಪ್ಪಿಸಿದ್ದು ಸಿದ್ದರಾಮಯ್ಯ. 2013ರಲ್ಲಿ ಅಂದಿನ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರನ್ನು ಸೋಲಿಸಿದರು, ಇದೀಗ ಡಿ.ಕೆ.ಶಿವಕುಮಾರ್ ಅವರಿಗೂ ಸಿದ್ದರಾಮಯ್ಯ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಹೇಳಿದರು.
ಅಂದು ತನಗೆ ಅನ್ಯಾಯ ಮಾಡಿದ ಸಿದ್ದರಾಮಯ್ಯ ಅವರಿಗೆ ಪಾಠ ಕಲಿಸಲು ಮಲ್ಲಿಕಾರ್ಜುನ ಖರ್ಗೆ ಸಿದ್ಧವಾಗಿದ್ದಾರೆ. ಇದರ ನಡುವೆ ಎಲ್ಲಿ ಚುನಾವಣೆಗೆ ಸ್ಪರ್ಧಿಸುವುದು ಎಂಬುದೇ ಸಿದ್ದರಾಮಯ್ಯ ಅವರಿಗೆ ತಿಳಿಯದಂತಾಗಿದೆ. ಸಿದ್ದರಾಮಯ್ಯ ಅಲೆಮಾರಿಯಂತಾಗಿದ್ದಾರೆ. ಅವರು ಎಲ್ಲಿ ಸ್ಪರ್ಧಿಸಿದರೂ ಸೋಲು ನಿಶ್ಚಿತ ಎಂದರು.
ಕೋಲಾರದ ಕಾರ್ಯಕರ್ತರು ಆಹ್ವಾನಿಸಿದ್ದಾರೆ, ಚಾಮರಾಜಪೇಟೆಯಲ್ಲಿ ಜಮೀರ್ ಕರೆಯುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ವಾಸ್ತವದಲ್ಲಿ ಅವರಿಗಾಗಿ ಕ್ಷೇತ್ರ ತ್ಯಾಗ ಮಾಡಲು ಯಾರೂ ಸಿದ್ಧರಿಲ್ಲ. ಸಿದ್ದರಾಮಯ್ಯ ಎರಡು ಕ್ಷೇತ್ರವಲ್ಲ, ಎಲ್ಲ 224 ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಸೋಲು ನಿಶ್ಚಿತ ಎಂದು ಹೇಳಿದರು.
ಕಾಂಗ್ರೆಸ್‌ನವರಿಗೆ ಜಾತಿ, ಗೂಂಡಾಗಿರಿ, ಹಣ ರಾಜಕೀಯದಿಂದ ಚುನಾವಣೆಗಳಲ್ಲಿ ಗೆದ್ದು ಅಭ್ಯಾಸವಾಗಿದೆಯೇ ಹೊರತು. ನೇರವಾಗಿ ಚುನಾವಣೆ ಎದುರಿಸಿ ಗೆಲ್ಲುವುದು ಸಾಧ್ಯವಿಲ್ಲ. ಹೀಗಾಗಿ ರಾಜ್ಯದಲ್ಲಿ ಆ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ. ಮತ್ತೆ ಬಿಜೆಪಿ ಸರ್ಕಾರ ನಿಶ್ಚಿತ ಎಂದು ವಿಶ್ವಾಸ ವ್ಯಕ್ತಡಿಸಿದರು.