ಜಿಲ್ಲೆ

ಸಚಿವ ಸ್ಥಾನ ನೀಡದಿರುವುದಕ್ಕೆ ಅತೃಪ್ತಿ: ಕೆ.ಎಸ್.ಈಶ್ವರಪ್ಪ ಪುನರುಚ್ಚಾರ

Shivamogga

ಶಿವಮೊಗ್ಗ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ತನಿಖೆಯಲ್ಲಿ ನನಗೆ ಕ್ಲೀನ್ ಚಿಟ್ ಸಿಕ್ಕಿದ್ದರೂ ಸಚಿವ ಸ್ಥಾನ ನೀಡದಿರುವ ಬಗ್ಗೆ ಅಸಮಧಾನವಿದೆ. ಆದರೂ ನಾನು ಪಕ್ಷದ ನಾಯಕರ ತೀರ್ಮಾನಕ್ಕೆ ಬದ್ದ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಪುನರುಚ್ಚರಿಸಿದ್ದಾರೆ.

ಸಚಿವ ಸಂಪುಟದಲ್ಲಿ ಹೆಚ್ಚು ದಿನ ಸ್ಥಾನಗಳನ್ನು ಖಾಲಿ ಇರಿಸುವುದು ಸೂಕ್ತವಲ್ಲ. ಸಚಿವ ಸಂಪುಟ ವಿಸ್ತರಣೆ, ಇಲ್ಲವೇ ಮರುರಚನೆ ಬಗ್ಗೆ ಶೀಘ್ರವೇ ಸಿಎಂ ಬಸವರಾಜ ಬೊಮ್ಮಾಯಿ, ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ನಮ್ಮ ನಾಯಕ ಬಿ.ಎಸ್.ಯಡಿಯೂರಪ್ಪ ಶೀಘ್ರವೇ ತೀರ್ಮಾನ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರೆಯವರ ರಾಜೀನಾಮೆಗೂ ನಾನು ರಾಜೀನಾಮೆ ನೀಡಿದ ಕಾರಣಕ್ಕೂ ವ್ಯತ್ಯಾಸವಿದೆ. ತನಿಖೆ ಬಳಿಕ ನಿರಪರಾಧಿ ಎಂಬುದು ಸಾಭೀತಾದರೆ ಮರಳಿ ಸಂಪುಟಕ್ಕೆ ಸೇರಿಸಿಕೊಳ್ಳುವ ಬಗ್ಗೆ ನಾಯಕರು ಭರವಸೆ ನೀಡಿದ್ದರು. ಅದು ಯಾವಾಗ ಈಡೇರುತ್ತದೆ ಎಂಬುದನ್ನು ಕಾದು ನೋಡಬೇಕಿದೆ ಎಂದರು.

ಡಿಕೆಶಿ-ಸಿದ್ದು ವಿರುದ್ಧ ಕಿಡಿ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಕೆ.ಎಸ್.ಈಶ್ವರಪ್ಪ, ಕಾಂಗ್ರೆಸ್‌ನವರ ಅಕ್ರಮದ ಬಗ್ಗೆ ತನಿಖೆಯನ್ನೇ ನಡೆಸಬಾರದೆ? ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಸಿಎಂ ಆಗಿದ್ದ ಸಂದರ್ಭದಲ್ಲಿ ಅರ್ಕಾವತಿ ಬಡಾವಣೆ ಹಗರಣವಾಗಿತ್ತು. ಅವರು ಅದರಲ್ಲಿ ಭಾಗಿಯಾಗಿಲ್ಲ ಎಂದಾದರೆ ಯಾವುದಾದರೂ ತನಿಖೆಗೆ ಒತ್ತಾಯಿಸಲಿ. ಅದನ್ನು ಬಿಟ್ಟು ನಮ್ಮ ಸಚಿವರ ವಿರುದ್ಧ ವೃಥಾ ಆರೋಪ ಮಾಡುವುದು ಸರಿಯಲ್ಲ ಎಂದು ಹೇಳಿದರು.

ಡಿ.ಕೆ.ಶಿವಕುಮಾರ್ ಏನೇ ಅಕ್ರಮ ಮಾಡಿದರೂ ಅವರ ವಿರುದ್ಧ ತನಿಖೆ ನಡೆಸಬಾರದೆ? ತಿಹಾರ್ ಜೈಲಿಗೆ ಅವರು ಹೋಗಿದ್ದಾದರೂ ಏಕೆ? ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬಹಳಷ್ಟು ಜನ ಹಣ ನೀಡಿರಬಹುದು. ಅದೇ ರೀತಿ ಡಿ.ಕೆ. ಸಹೋದರರು ಹಣ ನೀಡಿದ್ದಾರೆ. ಅದರ ಬಗ್ಗೆ ತನಿಖೆ ನಡೆಯುತ್ತಿದೆ. ಅವರ ಮೇಲೆ ದಾಳಿ ನಡೆದಾಗ ಕಂತೆ ಕಂತೆ ಹಣ, ದಾಖಲೆ ಸಿಕ್ಕಿದೆ. ಹೀಗಿರುವಾಗ ತನಿಖೆ ನಡೆಸದೇ ಬಿಡಬೇಕೇ ಎಂದು ಪ್ರಶ್ನಿಸಿದರು.